ಒಂದೇ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯದ ಅಪರೂಪದ ತೀರ್ಪು

ಕೊಪ್ಪಳ ಜಿಲ್ಲೆಯ ಗಂಗಾವತಿಯ ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ

ಕೊಪ್ಪಳ: ಒಂದೇ ಪ್ರಕರಣದಲ್ಲಿ ಬರೋಬ್ಬರಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಕೊಪ್ಪಳ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಂಗ ಇತಿಹಾಸದಲ್ಲಿ ಅಪರೂಪದ ತೀರ್ಪ ನೀಡಿದ ಹಿರಿಮೆಗೆ ಪಾತ್ರವಾಗಿದೆ. ಗಂಗಾವತಿಯ ಮರುಕುಂಬಿ ದಲಿತ ದೌರ್ಜನ್ಯ ಪ್ರಕರಣದ 98 ಅಪರಾಧಿಗಳಿಗೆ ಗುರುವಾರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ಇತರ ಮೂವರು ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

98 ಆರೋಪಿಗಳಿಗೆ ಏಕಕಾಲಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿರುವುದರಿಂದ ಈ ತೀರ್ಪು ಅಪರೂಪದ ಪ್ರಕರಣವಾಗಿದೆ. ಸಂತ್ರಸ್ತರ ಕುಟುಂಬಗಳು ಕಳೆದ ಹತ್ತು ವರ್ಷಗಳಿಂದ ಈ ತೀರ್ಪಿಗಾಗಿ ಕಾಯುತ್ತಿದ್ದವು. ಸೋಮವಾರ ಒಟ್ಟು 101 ಆರೋಪಿಗಳನ್ನು ಬಂಧಿಸಲಾಗಿದ್ದು, ತೀರ್ಪನ್ನು ಅಕ್ಟೋಬರ್ 24ಕ್ಕೆ ಕಾಯ್ದಿರಿಸಲಾಗಿತ್ತು. 117 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 101 ಮಂದಿಗೆ ಶಿಕ್ಷೆ ವಿಧಿಸಲಾಗಿದ್ದು, 16 ಆರೋಪಿಗಳು ಮೃತಪಟ್ಟಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಮೂವರು ಅಪರಾಧಿಗಳು ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದ್ದರಿಂದ ಅವರಿಗೆ ದಲಿತ ದೌರ್ಜನು ಕಾಯ್ದೆ ಅನ್ವಯವಾಗಿಲ್ಲ. ಹೀಗಾಗಿ ಅವರಿಗೆ ಕೊಲೆ ಯತ್ನ, ದೊಂಬಿ ಸೇರಿದಂತೆ ಇನ್ನಿತರ ಸೆಕ್ಷನ್‌ಗಳಲ್ಲಿ ಐದು ವರ್ಷದ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ತೀರ್ಪು ಪ್ರಕಟವಾದಾಗ 98 ಅಪರಾಧಿಗಳ ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ದುಃಖದಲ್ಲಿ ಅಳತೊಡಗಿದರು, ಆದರೆ ಸಂತ್ರಸ್ತರ ಕುಟುಂಬ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.



































 
 

ಏನಿದು ಪ್ರಕರಣ?

ಆಗಸ್ಟ್ 28 , 2014ರಂದು ಗಂಗಾವತಿ ನಗರದಲ್ಲಿರುವ ಶಿವ ಚಿತ್ರಮಂದಿರದಲ್ಲಿ ಮರಕುಂಬಿ ಗ್ರಾಮದ ದಲಿತ ಸಮುದಾಯದ ಮಂಜುನಾಥ ಮತ್ತು ಸ್ನೇಹಿತರು ಸಿನಿಮಾ ನೋಡಲು ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ಪಡೆಯುವ ವಿಚಾರದಲ್ಲಿ ಮೇಲ್ಜಾತಿಯವರು ಜಗಳ ಆರಂಭಿಸಿದ್ದರು. ಅಂದೇ ಸಂಜೆ ಗ್ರಾಮದ ಮೇಲ್ಜಾತಿಯವರು ದಲಿತರ ಕೇರಿಗೆ ನುಗ್ಗಿ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. 2014ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ ದಲಿತರ ಗುಡಿಸಲುಗಳಿಗೆ ಇತರ ಸಮುದಾಯದ ಕೆಲವರು ಬೆಂಕಿ ಹಚ್ಚಿದ್ದರು. ಈ ಘಟನೆಯನ್ನು ಪ್ರತಿಭಟಿಸಿ ಅನೇಕ ದಲಿತ ಮುಖಂಡರು ಕೊಪ್ಪಳ ಜಿಲ್ಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು. ಗ್ರಾಮದ ಕ್ಷೌರಿಕ ಅಂಗಡಿ ಮತ್ತು ಹೋಟೆಲ್‌ಗಳಿಗೆ ದಲಿತರಿಗೆ ಪ್ರವೇಶ ನಿರಾಕರಿಸಿದ್ದು ಘರ್ಷಣೆಗೆ ಮೂಲ ಕಾರಣ ಎನ್ನಲಾಗಿದೆ. ಮೂರು ತಿಂಗಳಿನಿಂದ ಮರುಕುಂಬಿ ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top