24 ತುಂಡು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಅನ್ಯಕೋಮಿನ ಯುವಕ
ಮಂಗಳೂರು: ಅನ್ಯಕೋಮಿನ ಯುವಕನೊಬ್ಬನ ಕಿರುಕುಳದಿಂದ ಬೇಸತ್ತು ಸುರತ್ಕಲ್ ಸಮೀಪದ ಇಡ್ಯದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸಂಭವಿಸಿದ್ದು, ಇದು ಲವ್ ಜಿಹಾದ್ ಕೃತ್ಯ ಎಂಬ ಆರೋಪ ಕೇಳಿಬಂದಿದೆ. ಅನ್ಯಕೋಮಿನ ಯುವಕ ಯುವತಿಯ ಸಹೋದರನಿಗೆ ಸಂದೇಶ ಕಳುಹಿಸಿ ತಂಗಿಯನ್ನು ಪ್ರೀತಿಸಲು ಹೇಳು ಇಲ್ಲದಿದ್ದರೆ 24 ತುಂಡು ಮಾಡುತ್ತೇನೆ ಎಂದು ಬೆದರಿಕೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.
ನನ್ನನ್ನು ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲ ನಿನ್ನನ್ನು 24 ತುಂಡು ಮಾಡುವೆ ಅಂತ ಯುವಕನಿಗೆ ಬೆದರಿಕೆ ಸಂದೇಶ ಬಂದಿದೆ. ಬೆದರಿಕೆ ಹಾಕಿದ ಆರೋಪಿ ಸುರತ್ಕಲ್ನವನೇ ಎಂದು ಯುವತಿ ಹೇಳಿದ್ದಾಳೆ.
ಯುವತಿಯ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿ ಅದರ ಮೂಲಕ ಆಕೆಯ ಸಹೋದರನಿಗೆ ಬೆದರಿಕೆ ಸಂದೇಶ ಮತ್ತು ಯುವತಿಗೆ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಆರೋಪಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಸುರತ್ಕಲ್ ಪೊಲೀಸರು ಶಾರಿಕ್ ನೂರ್‌ಜಹಾನ್ ಎಂಬವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಬಿಟ್ಟು ಕಳುಹಿಸಿದ್ದಾರೆ.
ಈ ಬಳಿಕವೂ ಆರೋಪಿ ಯುವತಿಯ ಸಹೋದರನಿಗೆ ನಿರಂತರ ಬೆದರಿಕೆ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಡೆತ್‌ನೋಟ್ ಬರೆದಿಟ್ಟು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಡೆತ್ನೋಟ್ನಲ್ಲಿ ಇಡ್ಯಾದ ಮುಸ್ಲಿಂ ಸಮುದಾಯದ ಯುವಕ ಕಿರುಕುಳ ನೀಡುತ್ತಿದ್ದಾನೆ. ಪೊಲೀಸರಿಂದಲೂ ಯಾವುದೇ ನ್ಯಾಯ ಸಿಕ್ಕಿಲ್ಲ. ಒಬ್ಬ ಮುಸ್ಲಿಮನ ಕೈಯಲ್ಲಿ ಅತ್ಯಾಚಾರ ಆಗಿ ಸಾಯುವ ಬದಲು ಈಗಲೇ ಸಾಯುತ್ತೇನೆ. ಶಾರೀಕ್ ಹಾಗೂ ನೂರ್‌ಜಹಾನ್ ಇಬ್ಬರನ್ನೂ ಬಿಡಬಾರದು ಎಂದು ಬರೆದಿದ್ದಾಳೆ.
ಯುವತಿ ಕಳೆದ ಮಾರ್ಚ್ನಲ್ಲಿ ಜನರಲ್ ಸ್ಟೋರ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಈಕೆಯ ಅಂಗಡಿ ಮುಂದೆಯೇ ಆರೋಪಿಯ ಮನೆ ಇದೆ. ಯುವಕನ ಮನೆಯವರು ಅಂಗಡಿಗೆ ಬರ್ತಿದ್ದರು. ಯುವಕನ ತಾಯಿ ನೂರ್‌ಜಹಾನ್ ಹಾಗೂ ಹುಡುಗಿಯ ತಾಯಿ ಸ್ನೇಹಿತರಾಗಿದ್ದರು. ಯುವಕನ ತಾಯಿ ಒಂದು ದಿನ ಬಂದು ನಿಮ್ಮ ಮಗಳು ಚಂದ ಇದ್ದಾಳೆ, ನಮ್ಮ ಮಗನಿಗೆ ಕೊಟ್ಟು ಮದುವೆ ಮಾಡಿ ಅಂದರು. ಹುಡುಗಿಯ ತಾಯಿ ಕೂಡಲೇ ಬೈದಿದ್ದಾರೆ ಯುವತಿಯ ಗೆಳತಿ ಡೀನಾ ಎಂಬವರು ತಿಳಿಸಿದ್ದಾರೆ.
ಯುವಕ ಫೇಸ್‌ಬುಕ್, ಗೂಗಲ್‌ಪೇ, ಇನ್‌ಸ್ಟಾಗ್ರಾಂ ಇತ್ಯಾದಿ ಸೋಷಿಯಲ್ ಮೀಡಿಯಾಗಳಿಂದ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ. ಅವನ ಕಿರುಕುಳದಿಂದ ಬೇಸತ್ತು ಯುವತಿ ಆತನ ಅಕೌಂಟ್ ಬ್ಲಾಕ್ ಮಾಡಿದ್ದಳು. ಬಳಿಕ ಸಹೋದರನಿಗೆ ಬೆರಿಕೆ ಸಂದೇಶ ಕಳುಹಸಿಲು ಶುರು ಮಾಡಿದ್ದ ಎಂದು ಆರೋಪಿಸಲಾಗಿದೆ.
ಗುರುವಾರ ರಾತ್ರಿ ಮತ್ತೆ ಯುವತಿಯ ಅಣ್ಣನಿಗೆ ಸಂದೇಶ ಕಳುಹಿಸಿ ಎಷ್ಟು ಸಾರಿ ನನ್ನನ್ನು ಜೈಲಿಗೆ ಕಳುಹಿಸಿದರು ಸಹ ಹೊರಗೆ ಬರುತ್ತೇನೆ, ಇವತ್ತಿನಿಂದ ಗೇಮ್ ಸ್ಟಾರ್ಟ್ ಎಂದು ಹೇಳಿದ್ದಾನೆ ಎಂದು ಬೆದರಿಸಿದ್ದಾನೆ. ಬಳಿಕ ಆಕೆ ಡೆತ್‌ನೋಟ್ ಬರೆದು ಮಾತ್ರೆ ನುಂಗಿದ್ದಾಳೆ. ನನಗೇನಾದರು ಆದ್ರೆ ಹುಡುಗನನ್ನು ಮತ್ತು ಅವನ ತಾಯಿಯನ್ನು ಬಿಡಬಾರದು ಎಂದು ಬರೆದಿದ್ದಾಳೆ. ಪೊಲೀಸರು ಯುವಕನನ್ನು ವಿಚಾರಣೆ ಮಾಡಿ ಹೊರಗೆ ಬಿಟ್ಟಿರುವುದರಿಂದ ಅವಳು ಹೆದರಿಕೊಂಡಿದ್ದಳು ಎನ್ನಲಾಗಿದೆ. ನಸುಕಿನ ಜಾವ 3 ಗಂಟೆ ಸುಮಾರಿಗೆ ನಿದ್ದೆ ಮಾತ್ರೆ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕ ಡಾ.ಭರತ್ ಶೆಟ್ಟಿ ಆಕ್ರೋಶ
ಮುಸ್ಲಿಮ್ ಯುವಕನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಹಿಂದೂ ಯುವತಿ ಜೀವನ್ಮರಣ ಸ್ಥಿತಿಯಲ್ಲಿದ್ದಾಳೆ. ಪೊಲೀಸರಿಗೆ ದೂರು ನೀಡಿದರೂ ಯುವಕನ ವಿರುದ್ಧ ಕ್ರಮ ಕೈಗೊಂಡಿಲ್ಲ. ಯುವತಿಯ ಸ್ಥಿತಿಗೆ ಪೊಲೀಸರೇ ನೇರ ಹೊಣೆ ಎಂದು ಮಂಗಳೂರು ಉತ್ತರದ ಶಾಸಕ ಡಾ.ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.