ಪುತ್ತೂರು : ಸೆಂಟ್ರಿಂಗ್ ಕಾರ್ಮಿಕರೋರ್ವರ ಮೃತದೇಹ ಪುತ್ತೂರಿನ ಹಾರಾಡಿ ಸಮೀಪ ರೈಲು ಹಳಿಯಲ್ಲಿ ಗುರುವಾರ ಮಧ್ಯಾಹ ಪತ್ತೆಯಾಗಿದೆ.
ಉಕ್ಕಿನಡ್ಕ ಸಮೀಪದ ಸರ್ಹಂಗಳ ನಿವಾಸಿ ತಿಮ್ಮ ನಾಯ್ಕ ಎಂಬವರ ಪುತ್ರ ಚನಿಯಪ್ಪ ಯಾನೆ ರಾಧಾಕೃಷ್ಣ ನಾಯ್ಕ (48) ಮೃತಪಟ್ಟವರು.
ಸೆಂಟ್ರಿಂಗ್ ಕಾರ್ಮಿಕರಾದ ರಾಧಾಕೃಷ್ಣ ಪುತ್ತೂರು ಸಮೀಪದ ಕಬಕ ಪರಿಸರದಲ್ಲಿ ಕೆಲಸ ನಿರ್ವಹಿಸುತ್ತಿದ್ದು ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದರು. ಬುಧವಾರ ಬೆಳಗ್ಗೆ ಮನೆಯಿಂದ ತೆರಳಿದ್ದರು ಎನ್ನಲಾಗಿದೆ. ಕಬಕ ಸ್ಟೇಶನ್ ವ್ಯಾಪ್ತಿಯ ರೈಲು ಹಳಿಯಲ್ಲಿ ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದ್ದು ಬುಧವಾರ ರಾತ್ರಿ ಹಳಿ ದಾಟುವಾಗ ರೈಲು ಡಿಕ್ಕಿಯಾಗಿರಬೇಕೆಂದು ಸಂಶಯಿಸಲಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾಲು ತುಂಡಾಗಿದ್ದು ರಾತ್ರಿ ವೇಳೆ ಯಾರ ಗಮನಕ್ಕೂ ಬಾರದೆ ಅತೀವ ರಕ್ತ ಸ್ರಾವದಿಂದ ವ್ಯಕ್ತಿ ಮೃತಪಟ್ಟಿರಬೇಕೆಂದು ಪೋಲಿಸರು ತಿಳಿಸಿದ್ದಾರೆ. ಮೃತರು ತಾಯಿ, ಪತ್ನಿ, ಪುತ್ರಿ, ಪುತ್ರ ಹಾಗೂ ಸಹೋದರರನ್ನು ಅಗಲಿದ್ದಾರೆ.
ರೈಲ್ವೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.