120 ಕಿ.ಮೀ. ಪ್ರಚಂಡ ವೇಗದ ಗಾಳಿ; 6 ಲಕ್ಷ ಮಂದಿ ಸ್ಥಳಾಂತರ
ಭುವನೇಶ್ವರ : ಬಂಗಾಳಕೊಲ್ಲಿಯ ವಾಯವ್ಯ ಭಾಗದಲ್ಲಿ ಸೃಷ್ಟಿಯಾಗಿರುವ ಡಾನಾ ಚಂಡಮಾರುತ ನಿರೀಕ್ಷೆಯಂತೆ ಮಧ್ಯರಾತ್ರಿ ಒಡಿಶಾ ಕರಾವಳಿಗೆ ಅಪ್ಪಳಿಸಿದೆ. ಕೇಂದ್ರಪಾರ ಜಿಲ್ಲೆಯ ಭಿತರ್ಕಾನಿಕಾ ಮತ್ತು ಭದ್ರಕ್‌ನ ಧಮ್ರಾ ನಡುವೆ ಅಪ್ಪಳಿಸಿ ಜೋರು ಮಳೆಯಾಗುತ್ತಿದೆ.
ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು ಒಡಿಶಾ, ಬಂಗಾಳದ ತೀರ ಪ್ರದೇಶಗಳಲ್ಲಿ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುತ್ತಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಉತ್ತರ ವಾಯವ್ಯ ದಿಕ್ಕಿನತ್ತ ಚಲಿಸುತ್ತಿದೆ.
ನೆರೆಯ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಮತ್ತು ಕೋಲ್ಕತ್ತಾದಲ್ಲಿ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸುರಿಯುತ್ತಿದೆ. ಒಡಿಶಾದ ಕರಾವಳಿ ಜಿಲ್ಲೆಗಳಾದ ಭದ್ರಕ್, ಕೇಂದ್ರಪಾರ, ಬಾಲಸೋರ್ ಮತ್ತು ಸಮೀಪದ ಜಗತ್‌ಸಿಂಗ್‌ಪುರದಲ್ಲಿ ಗಂಟೆಗೆ 100ರಿಂದ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಗುರುವಾರ ಸಂಜೆಯಿಂದ ಸ್ಥಗಿತಗೊಂಡಿದ್ದ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆಗಳು ಇಂದು ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಳ್ಳಲಿವೆ. ವಿಮಾನ ನಿಲ್ದಾಣವನ್ನು ಬಂದ್ ಮಾಡಿದ ಪರಿಣಾಮ ಸುಮಾರು 40 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ವ್ಯತ್ಯಯವಾಗಿದೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಭಾಗದಲ್ಲಿ ಸಂಚರಿಸುವ 400ಕ್ಕೂ ಹೆಚ್ಚು ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. ಒಡಿಶಾದಲ್ಲಿ ಸುಮಾರು 6 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.