17 ಬುಲೆಟ್‌ಗಳು ಹೊಕ್ಕಿದ್ದರೂ ಟೈಗರ್ ಹಿಲ್ ಗೆದ್ದು ಬಂದ ಸೈನಿಕ

19 ವರ್ಷ ಪ್ರಾಯದಲ್ಲೇ ಪರಮವೀರ ಚಕ್ರ ಪಡೆದ ವೀರ ಯೋಧ

ಆತನ ತಂದೆ ಕರಣ್ ಸಿಂಗ್‌ ಯಾದವ್ 1965-71ರ ಅವಧಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಹಾಗೆಯೇ ಎರಡು ಇಂಡೋ-ಪಾಕ್ ಯುದ್ಧಗಳಲ್ಲಿ ಧೀರೋದಾತ್ತವಾಗಿ ಹೋರಾಡಿ ಭಾರತವನ್ನು ಗೆಲ್ಲಿಸಿದ್ದರು. ಅದರಿಂದ ಮಗನಿಗೆ ರಾಷ್ಟ್ರಪ್ರೇಮವು ರಕ್ತದಲ್ಲಿಯೇ ಬಂದಿತ್ತು ಅನ್ನಿಸುತ್ತದೆ. ಅದರಿಂದ ಆತ ಭಾರತೀಯ ಸೇನೆಗೆ ಆಯ್ಕೆಯಾಗುವಾಗ ಆತನ ವಯಸ್ಸು ಕೇವಲ 16 ವರ್ಷ 5 ತಿಂಗಳು ಆಗಿತ್ತು.

ಅಪ್ಪನ ಭುಜದ ಮೇಲೆ ಮಿಂಚುತ್ತಿದ್ದ ಮೆಡಲ್‌ಗಳೇ ಆತನಿಗೆ ಪ್ರೇರಣೆ































 
 

ಆತನ ಹೆಸರು ಯೋಗೇಂದ್ರ ಸಿಂಗ್ ಯಾದವ್. ಹುಟ್ಟಿದ ಸ್ಥಳ ಉತ್ತರಪ್ರದೇಶದ ಬುಲಂದ್‌ಶಹರ್. ತನ್ನ ಊರಿನ ಸರಕಾರಿ ಶಾಲೆಯಲ್ಲಿ ಹೈಸ್ಕೂಲ್ ಮುಗಿಸುವಾಗಲೇ ಆತನಿಗೆ ಶಿಕ್ಷಣದ ಆಸಕ್ತಿ ಬತ್ತಿಹೋಗಿತ್ತು. ಅದಕ್ಕೆ ಕಾರಣ ಕಬ್ಬಿಣದ ಕಡಲೆ ಆಗಿದ್ದ ಗಣಿತ. ಇನ್ನೊಂದು ಕಾರಣ ಸೇನೆಯ ಆಕರ್ಷಣೆ. ಸೈನಿಕನಾಗಿದ್ದ ಅಪ್ಪನ ಭುಜದ ಮೇಲೆ ಮಿರಿಮಿರಿ ಮಿಂಚುತ್ತಿದ್ದ ಮೆಡಲ್‌ಗಳು ಆತನಿಗೆ ಸ್ಫೂರ್ತಿ. ಎರಡು ಯುದ್ಧಗಳನ್ನು ಗೆದ್ದು ಅಪ್ಪ ಊರಿಗೆ ಬಂದಾಗ ಆತನನ್ನು ಊರಿನವರು ದೊಡ್ಡ ವೇದಿಕೆ ನಿರ್ಮಾಣ ಮಾಡಿ ಸನ್ಮಾನ ಮಾಡಿದ್ದು, ಅಪ್ಪ ಕುತ್ತಿಗೆಗೆ ಮಣಗಟ್ಟಲೆ ಭಾರದ ಹಾರಗಳನ್ನು ಹಾಕಿಕೊಂಡು ಮನೆಗೆ ಬಂದದ್ದು ಇದೆಲ್ಲವೂ ಬಾಲಕನಿಗೆ ಸ್ಫೂರ್ತಿ ನೀಡಿದ ಘಟನೆಗಳೇ ಆಗಿದ್ದವು. ಹಾಗೆಯೇ ಸಣ್ಣ ಪ್ರಾಯದಲ್ಲಿ ಸೇನೆಗೆ ಸೇರಲು ಆತನಿಗೆ ಸಾಧ್ಯವಾಯಿತು. ಆತನ ಮನೆಯವರಿಗೂ ಅದು ಗೌರವದ ಸಂಕೇತವಾಗಿತ್ತು.

ಕಾರ್ಗಿಲ್ ಯುದ್ಧಕ್ಕೆ ಕರೆ ಬಂದಾಗ ಆತನಿಗೆ 19 ವರ್ಷವೂ ತುಂಬಿರಲಿಲ್ಲ

1999ರಲ್ಲಿ ಅತ್ಯಂತ ಭೀಕರ ಕಾರ್ಗಿಲ್ ಯುದ್ಧ ಸ್ಫೋಟವಾದಾಗ ಆತನ ಸೇನಾ ತರಬೇತು ಮುಗಿದಿತ್ತು ಮಾತ್ರ. ಆಗಲೇ ಆತ ಸೇನಾ ಪ್ರಮುಖರ ಗಮನ ಸೆಳೆದಾಗಿತ್ತು. ಆತನ ಅಗಲವಾದ ಭುಜಗಳು, ಚೂಪಾದ ಕಣ್ಣುಗಳು, ಬಲಿಷ್ಟವಾದ ರಟ್ಟೆಗಳು, ಅಗಲವಾದ ಹಣೆ ಇವುಗಳನ್ನು ನೋಡಿದರೆ ಯಾರಿಗಾದರೂ ಗೌರವ ಬರುವ ಹಾಗಿದ್ದವು.
ಕಾರ್ಗಿಲ್ ಯುದ್ಧದ ಕೇಂದ್ರ ಭಾಗ ಟೈಗರ್ ಹಿಲ್ ಆಗಿದ್ದು ಅದು ಆಗಲೇ ವೈರಿ ಪಾಕಿಸ್ಥಾನದ ವಶವಾಗಿತ್ತು. ಪಾಕಿಗಳು ಅಲ್ಲಿ ಬಂಕರ್ ನಿರ್ಮಿಸಿ ಭಾರತೀಯ ಸೈನಿಕರನ್ನು ಆಹುತಿ ಪಡೆಯಲು ಸಿದ್ಧತೆ ಮಾಡಿದ್ದರು. ಯೋಗೇಂದ್ರ ಸಿಂಗ್ ಯಾದವ್ ಸೈನಿಕನಾಗಿದ್ದ 18ನೇ ಗ್ರೆನೇಡಿಯರ್ ಪಡೆಗೆ ಆ ಟೈಗರ್ ಹಿಲ್ ವಶಪಡಿಸಿಕೊಳ್ಳುವ ಟಾಸ್ಕ್ ನೀಡಲಾಗಿತ್ತು.

ಮೈನಸ್ 20 ಡಿಗ್ರಿ ಉಷ್ಣತೆಯ ಹಿಮಾವೃತವಾದ ಕಡಿದಾದ ಬೆಟ್ಟ ಅದು

ಯೋಗೇಂದ್ರ ಸಿಂಗ್ ಯಾದವ್ ಇದ್ದ ಪ್ಲಟೂನ್‌ನಲ್ಲಿ ಇದ್ದವರೆಲ್ಲ ಪರಾಕ್ರಮಿಗಳು ಮತ್ತು ಶೌರ್ಯವೇ ಮೂರ್ತಿವೆತ್ತವರು ಆಗಿದ್ದರು. ಯಾವ ರಿಸ್ಕ್ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವವರೇ ಅಲ್ಲ. ಟೈಗರ್ ಹಿಲ್ ಅತ್ಯಂತ ಕಡಿದಾದ ಬೆಟ್ಟವಾಗಿದ್ದು 1000 ಅಡಿ ಎತ್ತರವಾಗಿತ್ತು. ದೇಹದ ಭಾರವನ್ನು ಹಗ್ಗದ ಮೇಲೆ ಹಾಕಿ ಬೆಟ್ಟವನ್ನು ಆ ಮೈಕೊರೆಯುವ ಚಳಿಯಲ್ಲಿ ಏರುವುದು ಸುಲಭದ ಕೆಲಸ ಆಗಿರಲಿಲ್ಲ. ನೆತ್ತಿಯ ಮೇಲೆ ಪಾಕ್ ಸೈನಿಕರು ಬಂಕರ್ ನಿರ್ಮಿಸಿ 24 ಗಂಟೆ ಕಾವಲು ಕೂತಿದ್ದರು.

4ನೇ ಜುಲೈ, 1999 ಮುಂಜಾನೆ 4 ಗಂಟೆ

ರಕ್ತನಾಳಗಳು ಹೆಪ್ಪುಗಟ್ಟುವ ಆ ಮುಂಜಾನೆಯ ಚಳಿಯಲ್ಲಿ ಗುಂಡಿಗೆ ಗಟ್ಟಿಮಾಡಿಕೊಂಡು ಆ 18ನೇ ಗ್ರೆನೇಡಿಯರ್ ಪಡೆಯು ಹಗ್ಗದ ಸಹಾಯ ಪಡೆದು ಬೆಟ್ಟ ಹತ್ತಲು ಆರಂಭಿಸಿತು. ಸೂರ್ಯನ ಕಿರಣಗಳು ಮೈಸೋಕಲು ಇನ್ನೂ ಗಂಟೆಗಳು ಬೇಕಾಗಿದ್ದವು. ಟಾರ್ಚ್ ಬಳಕೆ ಮಾಡುವ ಸಾಧ್ಯತೆಯೇ ಇರಲಿಲ್ಲ. ಆದ್ದರಿಂದ ಏನೇನೂ ಕಾಣುತ್ತಿರಲಿಲ್ಲ. ಅರ್ಧ ಹತ್ತುವಾಗಲೇ ಪಾಕ್ ಸೈನಿಕರಿಗೆ ಯಾವುದೋ ಸೂಚನೆಯು ಸಿಕ್ಕಿರಬೇಕು. ಮಷಿನ್ ಗನ್‌ಗಳು ಭಾರಿ ಶಬ್ದದೊಂದಿಗೆ ಬುಲ್ಲೆಟ್‌ಗಳನ್ನು ಉಗುಳ ತೊಡಗಿದವು. ಅತ್ಯಂತ ಅಪಾಯಕಾರಿಯಾದ ಕ್ಷಿಪಣಿಗಳು ತೂರಿಬಂದವು.

ಪ್ಲಟೂನ್ ಕಮಾಂಡರ್ ಮತ್ತು ಇಬ್ಬರು ಸೈನಿಕರಾದರು ಹುತಾತ್ಮ

ಯೋಗೇಂದ್ರ ಸಿಂಗ್ ಯಾದವ್ ಅರ್ಧ ಹತ್ತಿ ಮೇಲೆ ಬರುತ್ತಿದ್ದಾಗ ಆತನಿಗಿಂತ ಮುಂದೆ ಇದ್ದ ಪ್ಲಟೂನ್ ಕಮಾಂಡರ್ ಹುತಾತ್ಮರಾದರು. ಇಬ್ಬರು ಭಾರತೀಯ ಸೈನಿಕರು ಕೂಡ ಪ್ರಾಣ ಕಳೆದುಕೊಂಡರು. ಯೋಗೇಂದ್ರ ಸಿಂಗ್ ಅವರ ದೇಹದಲ್ಲಿ 17 ಅಪಾಯಕಾರಿ ಬುಲೆಟಗಳು ತೂರಿಕೊಂಡು ಹೋಗಿದ್ದವು. ಭುಜದಲ್ಲಿ ಮತ್ತು ತೊಡೆಸಂಧುಗಳಲ್ಲಿ ಬುಲೆಟ್ ನೆಟ್ಟು ಬಿಸಿರಕ್ತವು ಝಿಲ್ ಎಂದು ಚಿಮ್ಮಿತ್ತು. ಅವರು ಅವುಡು ಕಚ್ಚಿ ಆ ಅಸಾಧ್ಯವಾದ ನೋವು ಸಹಿಸಿಕೊಂಡರು. ಕಣ್ಣು ಆಗಲೇ ಮಂಜಾಗುತ್ತಿತ್ತು. ದೇಹದ ತ್ರಾಣವು ಕುಸಿದುಹೋಗಿತ್ತು.
ಆದರೂ ಯೋಗೇಂದ್ರ ಸಿಂಗ್ ಅವರು ಧೃತಿಗೆಡಲಿಲ್ಲ. ಆ ಪರಿಸ್ಥಿಯಲ್ಲಿ ಉಳಿದ ಸೈನಿಕರು ಅವರಿಗೆ ಹಿಂದಕ್ಕೆ ಹೋಗಲು ಹೇಳಿದರೂ ಅವರು ಕಿವಿಕೊಡಲಿಲ್ಲ.

ಆ ಗಾಯಗಳೊಂದಿಗೆ ಅವರು ಉಳಿದ 600 ಮೀಟರ್ ಏರಿದ್ದರು

ಅವರೀಗ ಟೈಗರ್ ಹಿಲ್ ತುದಿಯನ್ನು ತಲುಪಿದ್ದರು. ಸ್ವಲ್ಪ ದೂರದಲ್ಲಿ ಅಸ್ಪಷ್ಟವಾಗಿ ಶತ್ರುಗಳ ಬಂಕರ್‌ ಕಾಣುತ್ತಿತ್ತು. ಅವರು ಒಂದಿಷ್ಟೂ ಶಬ್ದ ಮಾಡದೆ ತೆವಳಿಕೊಂಡು ಹೋಗಿ ತನ್ನಲ್ಲಿದ್ದ ಗ್ರೆನೇಡ್‌ಗಳನ್ನು ಬಂಕರಿಗೆ ಗುರಿಯಿಟ್ಟು ಎಸೆದಿದ್ದರು. ದೊಡ್ಡ ಸ್ಫೋಟದೊಂದಿಗೆ ಬಂಕರ್ ಸುಟ್ಟುಹೋಗಿ ನಾಲ್ಕು ಪಾಕ್ ಸೈನಿಕರು ಸುಟ್ಟು ಕರಕಲಾಗಿ ಹೋಗಿದ್ದರು. ಅಂದು ಯೋಗೇಂದ್ರ ಸಿಂಗ್ ಮೈಯಲ್ಲಿ ಆವೇಶ ಬಂದ ಹಾಗೆ ಆಗಿತ್ತು.

ಅಷ್ಟು ಹೊತ್ತಿಗೆ ಉಳಿದ ಭಾರತೀಯ ಸೈನಿಕರು ಹಗ್ಗ ಹಿಡಿದು ಮೇಲೆ ಬರಲು ಸಮಯಾವಕಾಶ ದೊರೆತಿತ್ತು. ಅವರು ಯೋಗೇಂದ್ರ ಸಿಂಗ್ ಅವರ ಪರಾಕ್ರಮದಿಂದ ಸ್ಫೂರ್ತಿ ಪಡೆದ ಹಾಗೆ ಕಂಡು ಬರುತ್ತಿತ್ತು.

ಕೆಲವೇ ಕ್ಷಣಗಳಲ್ಲಿ ಟೈಗರ್ ಹಿಲ್ ಭಾರತದ ವಶವಾಗಿತ್ತು

ಭಾರತೀಯ ಸೈನಿಕರು ಕೈ ಕೈ ಹಿಡಿದುಕೊಂಡು ಪಾಕ್ ಚಕ್ರವ್ಯೂಹದಲ್ಲಿ ನುಗ್ಗಿದ್ದರು. ಅವರ ಹೋರಾಟಕ್ಕೆ ಪಾಕ್ ಸೈನಿಕರ ಬಳಿ ಉತ್ತರವೇ ಇರಲಿಲ್ಲ. ಅವರು ಜೊತೆ ಸೇರಿ ಪಾಕಿಗಳ ಬಂಕರ್‌ಗಳನ್ನು ಪೂರ್ತಿ ನಾಶ ಮಾಡಿ ಆಗಿತ್ತು. ಆ ಸಾಹಸವೇ ಮುಂದೆ ಕಾರ್ಗಿಲ್ ವಿಜಯಕ್ಕೆ ಕಾರಣ ಆಯಿತು ಎಂದು ಸೇನೆಯು ಬಣ್ಣಿಸಿದೆ.

ಮೈಯ್ಯಲ್ಲಿ 17 ಬುಲೆಟ್ ತಿಂದಿದ್ದ ಯೋಗೇಂದ್ರ ಸಿಂಗ್ ಯಾದವ್ ಇಡೀ ಟೈಗರ್ ಹಿಲ್ ವಶವಾದ ನಂತರ ಕುಸಿದುಬಿದ್ದರು. ಉಳಿದ ಸೈನಿಕರು ಅವರನ್ನು ಹೊತ್ತುಕೊಂಡು ಬಂದು ಸೇನಾ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಅವರು ಪೂರ್ತಿ ಕೋಮಾಕ್ಕೆ ಹೊರಟುಹೋಗಿದ್ದರು.

ಅವರಿಗೆ ಪರಮವೀರ ಚಕ್ರ ಪ್ರಶಸ್ತಿ ಘೋಷಣೆ ಆದಾಗ 19 ವರ್ಷ

ಭಾರತ ಸರಕಾರ ಸೈನಿಕರಿಗೆ ಕೊಡುವ ಪರಮೋಚ್ಚ ಗೌರವವಾದ ಪರಮವೀರ ಚಕ್ರ ಪ್ರಶಸ್ತಿ ಯಾದವ್‌ಗೆ ಘೋಷಣೆ ಮಾಡಿದಾಗ ಆತನ ವಯಸ್ಸು ಕೇವಲ 19ವರ್ಷ. ಆ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಯೋಧ ಯೋಗೇಂದ್ರ ಸಿಂಗ್ ಎನ್ನುವುದು ಇಂದಿಗೂ ದಾಖಲೆ.

ಆದರೆ ಆಗ ಒಂದು ನಾಟಕೀಯ ಸನ್ನಿವೇಶ ಏನು ನಡೆಯಿತು ಎಂದರೆ ಆತ ಬದುಕುವ ಸಾಧ್ಯತೆ ಕ್ಷೀಣ ಎಂದು ವೈದ್ಯರು ಹೇಳಿದ್ದರು. ಹೃದಯ ಬಡಿತ ಆಲ್ಮೋಸ್ಟ್ ನಿಂತು ಹೋಗಿತ್ತು. ಆಗ ಪ್ರಶಸ್ತಿಯನ್ನು ಮರಣೋತ್ತರವಾಗಿ ಕೊಡಬೇಕಾದೀತು ಎಂಬ ಗೊಂದಲವು ಹರಡಿತ್ತು. ಇಡೀ ಭಾರತ ಕಾರ್ಗಿಲ್ ಹೀರೊ ಯೋಗೇಂದ್ರ ಸಿಂಗ್ ಯಾದವ್ ಮರಳಿ ಬರಲಿ ಎಂದು ಪ್ರಾರ್ಥನೆ ಮಾಡುತ್ತಿತ್ತು. ಆಗ ಭಾರತ ಕಾರ್ಗಿಲ್ ಯುದ್ಧವನ್ನು ಗೆದ್ದಾಗಿತ್ತು.

ಇಡೀ ಭಾರತದ ಪ್ರಾರ್ಥನೆಯು ದೇವರನ್ನು ತಲುಪಿತ್ತು

ಒಂದು ಮುಂಜಾನೆ ಸೇನಾ ಆಸ್ಪತ್ರೆಯಲ್ಲಿ ಯೋಗೇಂದ್ರ ಸಿಂಗ್ ಕಣ್ಣು ತೆರೆದು ಧಿಗ್ಗನೆ ಎದ್ದು ಕೂತರು. ವೈದ್ಯರು ಇದನ್ನು ವೈದ್ಯಕೀಯ ರಂಗದ ವಿಸ್ಮಯ ಎಂದು ಕರೆದರು. ಕ್ಷಿಪ್ರವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆದರು. ಅತ್ಯಂತ ಸ್ಟ್ರಾಂಗ್ ಆದ ವಿಲ್ ಪವರ್ ಅವರನ್ನು ಬದುಕಿಸಿತ್ತು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅವರು ಪರಮವೀರ ಚಕ್ರ ಪ್ರಶಸ್ತಿ ಪಡೆದು ರಾಷ್ಟ್ರದ ಹೀರೊ ಆದರು.
ಅವರಿಗೆ ರಾಷ್ಟ್ರಪತಿಗಳ ಮೂಲಕ ಗೌರವ ಕ್ಯಾಪ್ಟನ್ ಹುದ್ದೆಯನ್ನು ಭಾರತೀಯ ಸೇನೆ ನೀಡಿತು. ಅವರು 2021ರ ಡಿಸೆಂಬರ್ 31ರಂದು ಸೇನೆಯಿಂದ ನಿವೃತ್ತಿ ಪಡೆದಾಗ ಅತ್ಯಂತ ಭಾವಪೂರ್ಣ ವಿದಾಯವನ್ನು ಪಡೆದರು ಎಂದು ಮಾಧ್ಯಮಗಳು ವರದಿ ಮಾಡಿದವು.

ಅವರ ಬದುಕನ್ನು ಆಧರಿಸಿ ಎರಡು ಸಿನಿಮಾ ಬಂದವು

2004ರಲ್ಲಿ ಲಕ್ಷ್ಯ ಎಂಬ ಹಿಂದಿ ಸಿನೆಮಾ ಭಾರಿ ಜನಪ್ರಿಯ ಆಯಿತು. ಖ್ಯಾತ ನಟ ಹೃತಿಕ್ ರೋಶನ್ ಅವರು ಯೋಗೇಂದ್ರ ಪಾತ್ರ ಮಾಡಿದ್ದರು. ಮುಂದೆ LOC ಕಾರ್ಗಿಲ್ ಎಂಬ ಸಿನಿಮಾ ಕೂಡ ಭಾರಿ ಹಿಟ್ ಆಯ್ತು. ಅದರಲ್ಲಿ ಮನೋಜ್ ಬಾಜಪೇಯಿ ಅವರ ಪಾತ್ರ ಮಾಡಿದ್ದರು.
2020ರಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೆಗಾ ಕರೋಡ್‌ಪತಿ’ ಶೋದಲ್ಲಿ ಅವರು ಭಾಗವಹಿಸಿದಾಗ ಅದನ್ನು ಇಡೀ ಭಾರತವೇ ಕಣ್ಣು ತೆರೆದು ನೋಡಿತ್ತು. ಅವರ ಜೊತೆಗೆ ಇನ್ನೊಬ್ಬ ಕಾರ್ಗಿಲ್ ಹೀರೊ ಸುಬೇದಾರ್ ಸಂಜಯ್ ಕುಮಾರ್ ಇದ್ದರು. ಅವರಿಬ್ಬರೂ ಸೇರಿ 25 ಲಕ್ಷ ರೂಪಾಯಿ ಬಹುಮಾನ ಗೆದ್ದದ್ದು ಮಾತ್ರವಲ್ಲ ಆ ದುಡ್ಡನ್ನು ಭಾರತೀಯ ಸೇನೆಗೆ ಸಮರ್ಪಣೆ ಮಾಡಿದ್ದು ಅತ್ಯಂತ ಭಾವುಕ ಕ್ಷಣವಾಗಿತ್ತು.

ಉತ್ತರಪ್ರದೇಶದ ಬುಲಂದ್‌ಶಹರಿನಲ್ಲಿ ಈಗಲೂ ವಾಸವಾಗಿರುವ, ಈಗಲೂ ಆರೋಗ್ಯವಾಗಿರುವ, ಈಗಲೂ ಪುಟಿಯುವ ಆತ್ಮವಿಶ್ವಾಸದ ಪ್ರತಿಮೆಯೇ ಆಗಿರುವ ಯೋಗೇಂದ್ರ ಸಿಂಗ್ ಯಾದವ್ ಅವರನ್ನು ಒಮ್ಮೆಯಾದರೂ ಭೇಟಿ ಆಗಬೇಕು ಎನ್ನುವುದು ನನ್ನ ಕನಸು.
ಜೈ ಹಿಂದ್!

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top