ಪುತ್ತೂರು: ಕಳೆದ ಹಲವು ವರ್ಷಗಳಿಂದ ವಿವಾದದಲ್ಲಿರುವ ಪುತ್ತೂರು-ಉಪ್ಪಿನಂಗಡಿ ರಸ್ತೆಯ ದಾರಂದಕುಕ್ಕು ಎಂಬಲ್ಲಿರುವ ಪ್ರಯಾಣಿಕರ ತಂಗುದಾಣ ಮತ್ತೆ ಮುನ್ನಲೆಗೆ ಬಂದಿದೆ. ತಂಗುದಾಣದ ಬಗ್ಗೆ ದೂರು ಬಂದಿರುವ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ನೇತೃತ್ವದಲ್ಲಿ ಬುಧವಾರ ಭೇಟಿ ನೀಡಿ ವಿವಿಧ ಇಲಾಖೆಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿದರು.
ದಾರಂದಕುಕ್ಕು ಎಂಬಲ್ಲಿ ಮುಖ್ಯರಸ್ತೆ ಬದಿಯಲ್ಲಿರುವ ಪ್ರಯಾಣಿಕರ ತಂಗುದಾಣವು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕ ದೂರಿನಲ್ಲಿ ಹಿನ್ನೆಲೆಯಲ್ಲಿ ಬೇಟಿ ನೀಡಿದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರರವರು ಕಂದಾಯ ಇಲಾಖೆ, ಭೂ ಮಾಪನಾ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆಯಾ ಇಲಾಖಾಧಿಕಾರಿಗಳು ಅಲ್ಲಿನ ವಸ್ತುಸ್ಥಿತಿಗಳ ಬಗ್ಗೆ ವಿವರಿಸಿದರು. ನಂತರ ನೆರೆದಿದ್ದ ಸಾರ್ವಜನಿಕರೊಂದಿಗೆ ಮಹಜರು ನಡೆಸಿದರು.
ಪರಿಶೀಲನೆ ನಡೆಸಿದ ಸಹಾಯಕ ಆಯುಕ್ತರು, ಪ್ರಯಾಣಿಕರ ತಂಗುದಾಣದ ಬಗ್ಗೆ ಸರಕಾರಕ್ಕೆ ಸಾರ್ವಜನಿಕ ದೂರು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ದೂರಿನ ಬಗ್ಗೆ ಮಾಹಿತಿ ಪಡೆಯಲು ಸ್ಥಳ ತನಿಖೆ ನಡೆಸಲಾಗುತ್ತಿದೆ. ತಂಗುದಾಣವನ್ನು ತೆರವುಗೊಳಿಸುವುದಿಲ್ಲ. ಅದರ ಬಗ್ಗೆ ಚಿಂತೆ ಬೇಡ. ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಸ್ಪಷ್ಟಪಡಿಸಿದರು.
ಅಪಘಾತ ಸ್ಥಳವೇ ಅಲ್ಲದಿದ್ದರೂ ದೂರುದಾರರು ಅಪಘಾತ ಸ್ಥಳವೆಂದು ಉಲ್ಲೇಖ ಮಾಡಿದ್ದಾರೆ. ಇಲ್ಲಿನ ವಿವಾದ ಇದೇ ಮೊದಲಲ್ಲ. ಕಳದೆ ಹಲವು ವರ್ಷಗಳಿಂದ ನಡೆಯುತ್ತಿದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಇದಕ್ಕೊಂದು ಅಂತ್ಯ ಕಾಣಬೇಕು. ಸಾಧ್ಯವಾದರೆ ರಸ್ತೆಯ ಇನ್ನೊಂದು ಬದಿಗೆ ಪ್ರತ್ಯೇಕ ಪ್ರಯಾಣಿಕರ ತಂಗುದಾನವನ್ನು ನಿರ್ಮಿಸಿಕೊಡುವಂತೆ ಸಹಾಯಕ ಆಯುಕ್ತರಲ್ಲಿ ಸಾರ್ವಜನಿಕರು ವಿನಂತಿಸಿದರು.
ದಾರಂದಕುಕ್ಕುನಲ್ಲಿ ೨೦ ಆಟೋ ರಿಕ್ಷಾಗಳಿವೆ. ಇಲ್ಲಿ ರಿಕ್ಷಾ ನಿಲ್ದಾಣವಿಲ್ಲ. ಮೂರು ಗ್ರಾಮಗಳಿಗೆ ಸಂಬಂಧಿಸಿ ಗ್ರಾಮಸ್ಥರು ಇಲ್ಲಿಗೆ ಬರುತ್ತಿದ್ದು ಇಲ್ಲಿ ಶೌಚಾಲಯವಿಲ್ಲ. ವಿಶ್ರಾಂತಿ ಕೊಠಡಿಯಿಲ್ಲ. ಹೀಗಾಗಿ ಇವೆಲ್ಲವನ್ನು ಒದಗಿಸುವಕೊಡುವಂತೆ ಸಾರ್ವಜನಿಕರು ಸಹಾಯಕ ಆಯುಕ್ತರಲ್ಲಿ ವಿನಂತಿಸಿದರು. ಇದಕ್ಕೆ ಪೂರಕವಾಗಿ ಜಾಗ ಗುರುತಿಸಿ ಕಾದಿರುಸುವಂತೆ ಗ್ರಾ.ಪಂ, ಕಂದಾಯ, ಭೂ ಮಾಪನ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಸಹಾಯಕ ಆಯುಕ್ತರು ಸ್ಥಳ ಪರಿಶೀಲನೆಗೆ ಭೇಟಿ ನೀಡುವ ಬಗ್ಗೆ ಮಾಹಿತಿ ಪಡೆದ ಕೋಡಿಂಬಾಡಿ, ಚಿಕ್ಕಮುಡ್ನೂರು, ಬೆಳ್ಳಿಪ್ಪಾಡಿ ಗ್ರಾಮಗಳ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ, ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯರಾದ ರಾಘವೇಂದ್ರ, ತಿಮ್ಮಪ್ಪ ಪೂಜಾರಿ, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ನೆಕ್ಕಿಲಾಡಿ ಗ್ರಾ.ಪಂ ಸದಸ್ಯ ಪ್ರಶಾಂತ್ ಸೇರಿದಂತೆ ಮೂರು ಗ್ರಾಮಗಳ ನೂರಾರು ಮಂದಿ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು.
ತಹಶೀಲ್ದಾರ್ ಪುರಂದರ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜರಾಮ್, ಸಹಾಯಕ ಇಂಜಿನಿಯರ್ ಪ್ರಮೋದ್, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಬಿ.ಎಂ., ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ಮೂರ್ತಿ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ, ಬನ್ನೂರು ಗ್ರಾ.ಪಂ ಪಿಡಿಓ ಚಿತ್ರಾವತಿ, ಗ್ರಾಮ ಆಡಳಿತಾಧಿಕಾರಿ ಕವಿತಾ ಉಪಸ್ಥಿತರಿದ್ದರು.
ಸಾರ್ವಜನಿಕ ದೂರು ಬಂದಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ತನಿಖೆ ನಡೆಸಲಾಗಿದೆ. ಸ್ಥಳೀಯರ ಮೂಲಕ ಮಹಜರು ಮಾಡಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು. ಮನವಿಯ ಮೇರೆಗೆ ವಾಸ್ತವಾಂಶ ತಿಳಿದುಕೊಳ್ಳಲು ತನಿಖೆ ನಡೆಸಲಾಗಿದೆ. ಈ ಹಿಂದೆಯು ಸಮಿತಿ ರಚಿಸಲಾಗಿತ್ತು. ಅದರ ಒಂದು ವರದಿಯನ್ನು ನೀಡಲಾಗಿದೆ. ಇದೀಗ ನಮಗೂ ಮತ್ತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದು ತನಿಖೆ ನಡೆಸಿ ವರದಿ ನೀಡಲಿದ್ದೇವೆ.
- ಜುಬಿನ್ ಮೊಹಪಾತ್ರ, ಸಹಾಯಕ ಆಯುಕ್ತರು
ಕಳೆದ ಹಲವು ವರ್ಷಗಳ ಹಿಂದೆ ಬಸ್ ನಿಲ್ದಾಣ ಆಗಬೇಕು ಎಂಬ ಬೇಡಿಕೆಯಿತ್ತು. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಹಳೆಯ ಬಸ್ ನಿಲ್ದಾಣ ತೆರವುಗೊಳಿಸಲಾಗಿತ್ತು. ಹೊಸ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಮನವಿ ಮಾಡಿದ್ದು .5 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿತ್ತು. ಕೆಲವು ವ್ಯಕ್ತಿಗಳು ತಮ್ಮ ಲಾಭಕ್ಕಾಗಿ ತಪ್ಪು ಮಾಹಿತಿ ನೀಡಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಮೂಲಕ ಬಸ್ ನಿಲ್ದಾಣ ತೆರವುಗೊಳಿಸಲು ತೊಂದರೆ ನೀಡುತ್ತಿದ್ದಾರೆ. ಈ ಹಿಂದಿನ ಜಿಲ್ಲಾಧಿಕಾರಿಗಳು ಸಮಿತಿ ರಚಿಸಿ ಸ್ಥಳ ಪರಿಶೀಲನೆ ನಡೆಸಿ ಬಸ್ ನಿಲ್ದಾಣಕ್ಕೆ ಇದೇ ಸೂಕ್ತ ಸ್ಥಳವೆಂದು ವರದಿ ನೀಡಿದ್ದರು. ಇದೀಗ ಸಹಾಯಕ ಆಯಕ್ತರು ಪರಿಶೀಲನೆ ನಡೆಸಿದ್ದು ಅವರಿಗೂ ಮನವರಿಕೆಯಾಗಿದೆ. ಸಮಾಜಕ್ಕೆ ಪೂರಕವಾದ ಕೆಲಸ ಮಾಡುವಾಗ ಒಂದಿಬ್ಬರು ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಸುಮಾರು ೫ ಸಾವಿರ ಮಂದಿಗೆ ಪ್ರಯೋಜನವಾಗುವ ಬಸ್ ನಿಲ್ದಾಣವಾಗಿದೆ. ಬಸ್ ನಿಲ್ದಾಣ ತೆರವುಗೊಳಿಸಿದರೆ ಸಂದರ್ಭ ಬಂದರೆ ೫೦೦೦ ಜನ ಸೇರಿಸಿ ಬಸ್ ನಿಲ್ದಾಣ ಮುಟ್ಟದಂತೆ ತಡೆಯಲಾಗುವುದು. ಉಗ್ರ ಹೋರಾಟ ಮಾಡಿ ಬಸ್ ನಿಲ್ದಾಣ ಉಳಿಸಿಕೊಳ್ಳಲಾಗುವುದು.
- ನಾಗೇಶ್ ಟಿ.ಎಸ್., ಸ್ಥಳೀಯರು