ಪುತ್ತೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಂಗಳೂರು ನೇತೃತ್ವದಲ್ಲಿ ಕುಳಾಯಿ ಚಿತ್ರಾಪುರ ಮನೆ ಸಹಯೋಗದೊಂದಿಗೆ ‘ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮ ತೋಟದ ಬೆಳಕಿ’ ಎಂಬ ಸದಾಶಯದೊಂದಿಗೆ ‘ಗಾಯತ್ರೀ ಸಂಗಮ’ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞ ಅ.26 ಹಾಗೂ 27 ರಂದು ಮಂಗಳೂರು ಕುಳಾಯಿ ಚಿತ್ರಾಪುರ ಮಠದ ಆವರಣದಲ್ಲಿ ನಡೆಯಲಿದೆ ಎಂದು ಯಾಗ ಸಮಿತಿ ಉಪಾಧ್ಯಕ್ಷ, ನ್ಯಾಯವಾದಿ ಎನ್.ಕೆ.ಜಗನ್ಜಿವಾಸ ರಾವ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅ.26 ರಂದು ಬೆಳಿಗ್ಗೆ 8.30 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಪ್ರಾರ್ಥನೆ, ಗೋಪೂಜೆ, ಗಣಪತಿ ಹೋಮ, ದುರ್ಗಾ ಹೋಮ, ರುದ್ರಹೋಮ, ಕೃಷ್ಣಮಂತ್ರ ಹೋಮ, ಪವಮಾನ ಹೋಮ, ನಾಗದೇವರಿಗೆ ಅಭಿಷೇಕ ನಡೆಯಲಿದೆ. ಬೆಳಿಗ್ಗೆ 11 ರಿಂದ 12 ರ ತನಕ ಆದಿತ್ಯ ಯುವ ಸಂಗಮದ ಅಂಗವಾಗಿ ಹಳೆ ಬೇರು ಹೊಸ ಚಿಗುರು ಸಂವಾದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ರಿಂದ3 ರ ತನಕ ಜಿಲ್ಲೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ‘ಗಾಯತ್ರೀ ಮಹಾತ್ಮೆ’, 3 ರಿಂದ 4 ರ ತನಕ ಬ್ರಾಹ್ಮಣ ಸಭಾದ ಮಹಿಳಾ ಘಟಕದ ನೇತೃತ್ವದಲ್ಲಿ ‘ವೇದ ಮಾತಾ ಗಾಯತ್ರೀ ಸಂಸಾರ, ಸಂಸ್ಕಾರ, ಚಿಂತನೆ, ಸಾಕ್ಷಾತ್ಕಾರ ಕುರಿತು ಉಪನ್ಯಾಸ ವಿದ್ವಾನ್ ಮೇಲುಕೋಟೆ ಉಮಾಕಾಂತ್ ಭಟ್ ಅವರಿಂದ ನಡೆಯಲಿದೆ. 5.30 ರಿಂದ ಕಲಶ ಪ್ರತಿಷ್ಠೆ, ಅರಣೀ ಮಾಧವ, ಅಷ್ಟಾವಧಾನ ಯಜ್ಞ ಮಂಟಪದಲ್ಲಿ ನೃತ್ಯ ವಿದುಷಿ ಪ್ರತಿಮಾ ಶ್ರೀಧರ್ ಅವರಿಂದ ನೃತ್ಯಾಮೃತ, ಶರಣ್ಯಾ, ಸುಮೇಧಾ ಸಹೋದರಿಯರಿಂದ ಗಾನಾಮೃತ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಅ.27 ರಂದು ಪ್ರಾತಃಕಾಲ 6.30 ಕ್ಕೆ ಗಾಯತ್ರಿ ಯಜ್ಞ ಪ್ರಾರಂಭ, 10.30 ಕ್ಕೆ ವೇದಮೂರ್ತಿ ಯಜ್ಞ ಪೂರ್ಣಾಹುತಿ ವೇದಮೂರ್ತಿ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. 11 ರಿಂದ ನಡೆಯುವ ಧರ್ಮ ಸಭೆಯಲ್ಲಿ ಉಡುಪಿ ಶ್ರೀಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಧರ್ಮ ಸಂದೇಶ ನೀಡುವರು. ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ಶ್ರೀಪಾದರು ಉಪಸ್ಥಿತರಿರುವರು. ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ, ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆ ವಹಿಸುವರು. ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪುತ್ತೂರು ತಾಲೂಕು ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಸದಸ್ಯ ಸದಾಶಿವ ಹೊಳ್ಳ, ಪ್ರಧಾನ ಸಮಿತಿ ಅಧ್ಯಕ್ಷ ಮಹೇಶ್ ಕಜೆ, ಉಪಾಧ್ಯಕ್ಷ ಶಿವಶಂಕರ ಭಟ್ ಬೋನಂತಾಯ ಉಪಸ್ಥಿತರಿದ್ದರು.