ವಿಜಯನಗರ: ಕಲುಷಿತ ನೀರು ಕುಡಿದು ವಾಂತಿಭೇದಿಯಿಂದ ಬಳಲಿ ನವಜಾತ ಶಿಶು ಸೇರಿದಂತೆ ಐವರು ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಸಂಭವಿಸಿದೆ. ಹರಪನಹಳ್ಳಿ ತಾಲೂಕಿನ ಟಿ ತುಂಬಿಗೇರೆ ಗ್ರಾಮದ ಸುರೇಶ್ (30), ಮಹಾಂತೇಶ್ (45), ಗೌರಮ್ಮ (60), ಹನುಮಂತಪ್ಪ (38) ಮತ್ತು ಎಂಟು ತಿಂಗಳ ಗಂಡು ಮಗು ಮೃತಪಟ್ಟಿದೆ.
ಗ್ರಾಮಕ್ಕೆ ಕಳೆದ 15 ದಿನಗಳಿಂದ ಕಲುಷಿತ ನೀರು ಸರಬರಾಜು ಆಗುತ್ತಿದೆ. ಇದನ್ನು ತಿಳಿಯದೆ ಗ್ರಾಮಸ್ಥರು ನೀರು ಕುಡಿಯುತ್ತಿದ್ದಾರೆ. ಇದರಿಂದ ಗ್ರಾಮದ 50ಕ್ಕೂ ಹೆಚ್ಚು ಜನರು ವಾಂತಿಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗರ್ಭಿಣಿ ನಿಂಗಮ್ಮ ಎಂಬುವರು ವಾಂತಿಭೇದಿಯಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲುಷಿತ ನೀರು ಸೇವಿಸಿ ಐವರು ವಾಂತಿ-ಭೇದಿಯಿಂದ ಬಳಲುತ್ತಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿದೇವು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ” ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ, ತಾಲೂಕು ಆರೋಗ್ಯ ಅಧಿಕಾರಿಗಳು ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿರುವುದನ್ನು ದೃಢಪಡಿಸಿಲ್ಲ. ಸದ್ಯ ನೀರನ್ನು ತಪಾಸಣೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಐವರ ಸಾವಿಗೆ ಕಾರಣವೇನು ಎಂಬುವುದು ತಿಳಿಯಲಿದೆ.
ಇಷ್ಟು ಅನಾಹುತ ಸಂಭವಿಸಿದರೂ ಆರೋಗ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಇನ್ನೂವರೆಗೂ ಭೇಟಿ ನೀಡದೆ ಇದ್ದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.