ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ
ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿಯಾಗಲು ಪಟ್ಟುಹಿಡಿದಿರುವ ಮಾಜಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಯೋಗೀಶ್ವರ್ ಕಾಂಗ್ರೆಸ್ ಸೇರಿ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂಬ ಊಹಾಪೋಹವನ್ನು ಈ ಬೆಳವಣಿಗೆ ಬಹುತೇಕ ದೃಢಪಡಿಸಿದೆ.
ಎಚ್.ಡಿ.ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿರುವ ಕಾರಣ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಖಾಲಿಯಾಗಿದೆ. ಈಗ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರುವುದರಿಂದ ಈ ಕ್ಷೇತ್ರವನ್ನು ತನಗೆ ಕೊಡಬೇಕೆಂದು ಜೆಡಿಎಸ್ ಪಟ್ಟುಹಿಡಿದಿತ್ತು. ಚನ್ನಪಟ್ಟಣದಿಂದ ಸ್ಪರ್ಧಿಸಲೇ ಬೇಕೆಂದು ಯೋಗೀಶ್ವರ್ ಪಟ್ಟುಹಿಡಿದಿದ್ದ ಕಾರಣ ಬಿಜೆಪಿಗೆ ಉಭಯ ಸಂಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಯೋಗೀಶ್ವರ್ಗೆ ಜೆಡಿಎಸ್ ಟಿಕೇಟಿನಲ್ಲಿ ಸ್ಪರ್ಧಿಸಲು ಬಿಜೆಪಿ ನಾಯಕರು ಸಲಹೆ ನೀಡಿದ್ದರು. ಆದರೆ ಇದನ್ನು ತಿರಸ್ಕರಿಸಿದ ಯೋಗೀಶ್ವರ್ ಸ್ವತಂತ್ರವಾಗಿ ಸ್ಪರ್ಧಿಸುವ ಉದ್ದೇಶದಿಂದ ಕೆಲದಿನಗಳ ಹಿಂದೆ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದರ ಬೆನ್ನಿಗೆ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ಗೆ ಸೆಳೆಯಲು ಗಾಳ ಹಾಕಿದ್ದರು. ಇಂದು ಬೆಳ್ಳಂಬೆಳಗ್ಗೆ ಡಿಕೆಶಿ ಮನೆಗೆ ಯೋಗೀಶ್ವರ್ ಭೇಟಿ ನೀಡುವುದರೊಂದಿಗೆ ಕಾಂಗ್ರೆಸ್ ತಂತ್ರಗಾರಿಕೆ ಬಹುತೇಕ ಫಲಿಸಿದಂತಾಗಿದೆ. ಯೋಗೀಶ್ವರ್ ಅವರನ್ನು ತಮ್ಮ ಕಾರಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಡಿಕೆಶಿ ಕರೆದೊಯ್ದಿದ್ದಾರೆ. ಇಂದೇ ಯೋಗೀಶ್ವರ್ ಕಾಂಗ್ರೆಸ್ ಸೇರ್ಪಡೆ ಘೋಷಣೆಯಾಗುವ ಸಾಧ್ಯತೆಯಿದೆ. ಸಿದ್ದರಾಮಯ್ಯನವರೂ ನಮ್ಮ ಸಿದ್ಧಾಂತವನ್ನು ಒಪ್ಪಿಕೊಂಡು ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು ಎಂದು ಹೇಳುವ ಮೂಲಕ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.