ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಸಿ.ಪಿ.ಯೋಗೇಶ್ವರ್‌

ಚನ್ನಪಟ್ಟಣ ಉಪಚುನಾವಣೆಗೆ ಡಿಕೆಶಿ ಮಾಡಿದ ತಂತ್ರಗಾರಿಕೆಗೆ ಮೊದಲ ಯಶಸ್ಸು

ಬೆಂಗಳೂರು: ನಿರೀಕ್ಷಿಸಿದಂತೆ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಯೋಗೇಶ್ವರ್​ ಅಧಿಕೃತವಾಗಿ ಕಾಂಗ್ರೆಸ್‌ ಸೇರಿದರು. ಈ ಮೂಲಕ ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿ ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ವಿಚಾರದಲ್ಲಿ ಡಿಕೆಶಿ ಮಾಡಿದ ತಂತ್ರಗಾರಿಕೆ ಸದ್ಯಕ್ಕಂತೂ ಯಶಸ್ವಿಯಾಗಿದೆ.
ಕಾಂಗ್ರೆಸ್ ಸೇರ್ಪಡೆಗೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಇರುವಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ್ದಾರೆ. ವಾಟ್ಸಾಪ್​ ಮೂಲಕ ರಾಜೀನಾಮೆ ಪತ್ರವನ್ನು ರವಾನಿಸಿದ್ದು, ಈ ದಿನ ನಾನು ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆ ಸ್ವೀಕರಿಸಬೇಕೆಂದು ಕೋರುತ್ತೇನೆ. ಇಲ್ಲಿಯವರೆಗೆ ನನಗೆ ತಾವು ನೀಡಿದ ಸಹಕಾರಕ್ಕಾಗಿ ವಂದನೆಗಳು ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಬಳಿಕ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು.
ಯೋಗೇಶ್ವರ್​ ಬಿಜೆಪಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಲೇ ಅವರು ಕಾಂಗ್ರೆಸ್​ ಸೇರುತ್ತಾರೆ ಎನ್ನುವ ಚರ್ಚೆಗಳು ನಡೆದಿದ್ದವು. ಅಷ್ಟೇ ಅಲ್ಲದೇ ಕುಮಾರಸ್ವಾಮಿ ಅವರೇ ಯೋಗೇಶ್ವರ್​ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಅಂದೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ತಂತ್ರಗಾರಿಕೆ ರೂಪಿಸಿ ಸೈಲೆಂಟ್ ಆಗಿಯೇ ಯೋಗೇಶ್ವರ್​ಗೆ ಗಾಳ ಹಾಕಿದ್ದರು. ಹೇಗಿದ್ದರೂ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲ್ಲ. ಇದರಿಂದ ಯೋಗೇಶ್ವರ್​ ಬಂಡಾಯ ಎದ್ದೇಳುವುದು ಖಚಿತ ಎನ್ನುವ ಸುಳಿವು ಡಿ.ಕೆ ಬ್ರದರ್ಸ್​ಗೆ ಸಿಗುತ್ತಿದ್ದಂತೆಯೇ ಅವರನ್ನು ಕಾಂಗ್ರೆಸ್​ಗೆ ಕರೆತರಲು ಸೈಲೆಂಟ್​ ಆಗಿಯೇ ಪ್ಲಾನ್ ಮಾಡಿದ್ದರು. ಅದು ಇದೀಗ ಕೊನೆ ಕ್ಷಣದಲ್ಲಿ ಡಿಕೆ ಬ್ರದರ್ಸ್​ ಪ್ರಯೋಗಿಸಿದ್ದ ಅಸ್ತ್ರ ಯಶಸ್ವಿಯಾಗಿದೆ.

ಸಿದ್ದರಾಮಯ್ಯ ಸಹ ಯೋಗೇಶ್ವರ್​ ಕರೆತರುವಲ್ಲಿ ಆಸಕ್ತಿ ತೋರಿಸಿದ್ದರು. ಅದರೆ ಯೋಗೇಶ್ವರ್ ಸೇರಿಸಿಕೊಳ್ಳುವುದಕ್ಕೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಒಲವು ತೋರಿರಲಿಲ್ಲ. ಸಿದ್ದರಾಮಯ್ಯ ನೇರವಾಗಿ ಹೈಕಮಾಂಡ್ ನಾಯಕರಿಗೆ ಕರೆ ಮಾಡಿ ಒಪ್ಪಿಸಿದ್ದರು. ಬಳಿಕ ತಮ್ಮ ಆಪ್ತರ ಮೂಲಕ ಯೋಗೇಶ್ವರ್​ ಸೆಳೆಯಲು ಕಾರ್ಯಾಚರಣೆ ನಡೆಸಿದ್ದರು. ಇದಕ್ಕೆ ಜೆಡಿಎಸ್​ನ ಹಿರಿಯ ನಾಯಕರೊಬ್ಬರು ಸಾಥ್ ಕೊಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈಗ ಚನ್ನಪಟ್ಟಣ ಉಪಚುನಾವಣೆ ಕದನ ರಂಗೇರಿದ್ದು, ಜೆಡಿಎಸ್​-ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರು ಎನ್ನುವ ಕುತೂಹಲ ಉಳಿದಿದೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top