ಪುತ್ತೂರು: ನ.1ರಂದು ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಬೆಳಿಗ್ಗೆ ದರ್ಬೆ ವೃತ್ತದಿಂದ ಕನ್ನಡ ಭುವನೇಶ್ವರಿಯ ಭಾವಚಿತ್ರದೊಂದಿಗೆ ವೈಭವದ ಮೆರವಣಿಗೆ ನಡೆಯಲಿದ್ದು, ಈ ಕುರಿತು ಪೂರ್ವಭಾವಿ ಸಭೆ ಆಡಳಿತ ಸೌಧದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವ ನಿಟ್ಟಿನಲ್ಲಿ ಚರ್ಚೆಗಳು ನಡೆದವು. ಮೆರವಣಿಗೆಯ ಖರ್ಚು ವೆಚ್ಚಗಳನ್ನು ಭರಿಸುವ ಕುರಿತು ಸಂಘ ಸಂಸ್ಥೆಗಳಲ್ಲಿ ವಿನಂತಿಸಲಾಯಿತು. ಮೆರವಣಿಗೆಯಲ್ಲಿ ಕನ್ನಡ ಭುವನೇಶ್ವರಿ ಭಾವಚಿತ್ರ ಸಹಿತ ವಿವಿಧ ಸ್ತಬ್ಧಚಿತ್ರಗಳಿಗೆ ಅವಕಾಶವಿದ್ದು, ಪ್ರಾಯೋಜಕತ್ವದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.
ಬೆಳಿಗ್ಗೆ 7 ಗಂಟೆಗೆ ಮೆರವಣಿಗೆಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ ನೀಡಲಿದ್ದು, ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆ ಕಿಲ್ಲೆ ಮೈದಾನದ ತನಕ ಸಾಗಿ ಬಳಿಕ ಪುರಭವನದಲ್ಲಿ ಸಭಾ ಕಾರ್ಯಕ್ರಮ ನಡೆಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಕಾರ್ಯಕ್ರಮದ ವಿವರಗಳನ್ನು ನೀಡಿದರು.
ವೇದಿಕೆಯಲ್ಲಿ ಶಿಕ್ಷಣಾಧಿಕಾರಿ ಲೋಕೇಶ್, ಉಪತಹಶೀಲ್ದಾರ್ ಸುಲೋಚನಾ, ತಾಲೂಕು ಪಂಚಾಯಿತಿಯ ದಯಾನಂದ, ಶಿಕ್ಷಣಾಧಿಕಾರಿ ಕಚೇರಿಯ ಹರಿಪ್ರಸಾದ್ ಉಪಸ್ಥಿತರಿದ್ದರು.
ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.