ಐದು ವರ್ಷಗಳಿಂದ ಜನರಿಗೆ ಮೋಸ ಮಾಡುತ್ತಿದ್ದ ಈ ಮಹಾಕಿಲಾಡಿ
ಅಹ್ಮದಾಬಾದ್: ನಕಲಿ ಪೊಲೀಸ್, ನಕಲಿ ಡಾಕ್ಟರ್‌ಗಳು ಜನರನ್ನು ಏಮಾರಿಸುವ ಘಟನೆಗಳು ಸಾಮಾನ್ಯ. ಆದರೆ ಗುಜರಾತಿನ ಈ ಕಿಲಾಡಿ ಪಾತಕಿ ಮಾತ್ರ ನ್ಯಾಯಾಧೀಶನ ಸೋಗುಹಾಕಿ ಕಳೆದ 5 ವರ್ಷಗಳಿಂದ ಜನರಿಗೆ ಮೋಸ ಮಾಡುತ್ತಿದ್ದ. ಇದಕ್ಕಾಗಿ ಆತ ನಕಲಿ ನ್ಯಾಯಾಲಯವನ್ನೂ ಸ್ಥಾಪಿಸಿದ್ದ.
ಗುಜರಾತಿನ ಗಾಂಧಿನಗದರಲ್ಲಿ ಕಾರ್ಯಾಚರಿಸುತ್ತಿತ್ತು ನಕಲಿ ನ್ಯಾಯಾಧೀಶ ಮೋರಿಸ್ ಸಾಮ್ಯುವೆಲ್ ಕ್ರಿಶ್ಚಿಯನ್ ಎಂಬಾತನ ನ್ಯಾಯಾಲಯ. ಈತ ಮುಖ್ಯವಾಗಿ ಭೂ ವಿವಾದ ಹೊಂದಿರುವವರನ್ನು ಬಲೆಗೆ ಕೆಡವಿಕೊಂಡು ಮೋಸ ಮಾಡುತ್ತಿದ್ದ. ಭೂವಿವಾದ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ತಾನು ಸರಕಾರದಿಂದ ನೇಮಿಸಲ್ಪಟ್ಟ ಆರ್ಬಿಟ್ರೇಟರ್ ಎಂದು ಹೇಳಿ ಅವರನ್ನು ನಂಬಿಸುತ್ತಿದ್ದ. ಕೋರ್ಟಿಗೆ ಬರಲು ನೋಟಿಸ್ ನೀಡಿದ ಬಳಿಕ ಅವರ ಪರವಾಗಿ ತೀರ್ಪು ನೀಡುವ ವ್ಯವಹಾರ ಕುದುರಿಸಿ ಹಣ ತೆಗೆದುಕೊಳ್ಳುತ್ತಿದ್ದ.
ಈತ ಗಾಂಧಿನಗರದಲ್ಲಿದ್ದ ತನ್ನ ಕಚೇರಿಯನ್ನೇ ನ್ಯಾಯಾಲಯದ ಮಾದರಿ ಪರಿವರ್ತಿಸಿಕೊಂಡಿದ್ದ. ನ್ಯಾಯಾಧೀಶರ ಪೀಠ ಇತ್ಯಾದಿಗಳನ್ನೆಲ್ಲ ಮಾಡಿಕೊಂಡಿದ್ದ. ಅವನ ಸಹಚರರೇ ಕೋರ್ಟ್ ಸಿಬ್ಬಂದಿ ಮತ್ತು ವಕೀಲರಂತೆ ನಟಿಸುತ್ತಿದ್ದರು. ವಿಚಾರಣೆ ನಡೆಸಿ ತನ್ನ ಕಕ್ಷಿಗಳ ಪರ ತೀರ್ಪು ನೀಡಿ ಆದೇಶ ಪ್ರತಿಯನ್ನೂ ನೀಡುತ್ತಿದ್ದ.
ಐದು ವರ್ಷದ ಹೀಂದೆ ತೀರ್ಪು ನೀಡಿದ ವ್ಯಾಜ್ಯವೊಂದು ಮರಳಿ ಜೀವ ಪಡೆದುಕೊಂಡಾಗ ಮೋರಿಸ್‌ನ ವಂಚನೆ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಸ್ವಾಧೀನದಲ್ಲಿದ್ದ ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ಮೋರಿಸ್ ಇದೇ ರೀತಿ ವಿಚಾರಣೆಯ ನಾಟಕವಾಡಿ ತೀರ್ಪು ನೀಡಿದ್ದ. ವಂಚನೆ ಬಯಲಾಗುತ್ತಿದ್ದಂತೆ ಪೊಲೀಸರು ಸಾಮ್ಯುವೆಲ್ ಮತ್ತು ಅವನ ಸಹಚರರನ್ನು ಬಂಧಿಸಿದ್ದಾರೆ. ಅವನ ವಂಚನೆಯ ಶೈಲಿಯನ್ನು ಕಂಡು ಪೊಲೀಸರೇ ದಂಗುಬಡಿದು ಹೋಗಿದ್ದಾರೆ.