ಪುತ್ತೂರು: ಸ್ವಂತ ಸಂಸ್ಥೆಯೊಂದನ್ನು ಸ್ಥಾಪಿಸುವ ಹಂಬಲ ಪ್ರತಿಯೊಬ್ಬನಲ್ಲೂ ಮೂಡಬೇಕು. ಆಲೋಚನೆಗಳು ನಿರ್ದಿಷ್ಟ ಪರಿಧಿಗೆ ಸೀಮಿತವಾಗದೆ ವಿವಿಧ ಆಯಾಮಗಳಲ್ಲಿ ಚಿಂತಿಸುವಂತಾಗಬೇಕು. ಉದ್ಯೋಗಾಕಾಂಕ್ಷಿಗಳಾಗದೆ ಉದ್ದಿಮೆದಾರನಾಗಬೇಕು ಎಂದು ಕುಂಬ್ಳೆ ಸಮೂಹ ಸಂಸ್ಥೆಗಳ ನಿರ್ದೇಶಕ ಕುಂಬ್ಳೆ ನರಸಿಂಹ ಪ್ರಭು ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ’ಉದ್ಯಮಶೀಲತೆ- ಕಲ್ಪನೆಯಿಂದ ವಾಸ್ತವಕ್ಕೆ ಪರಿವರ್ತನೆ’ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾರಾಯಣಮೂರ್ತಿ, ಅಜಿಂ ಪ್ರೇಮ್‌ಜಿ ಇನ್ಫೋಸಿಸ್, ವಿಪ್ರೋ ಕಂಪನಿಗಳನ್ನು ಕಟ್ಟುವ ಬಗ್ಗೆ ಯೋಚನೆಯೇ ಮಾಡದೆ ಉದ್ಯೋಗಿಯಾಗಿರುತ್ತೇನೆಂದು ಚಿಂತಿಸಿದ್ದರೆ ಇವತ್ತು ಇನ್ಫೋಸಿಸ್, ವಿಪ್ರೋ ಇಂತಹ ಅದೆಷ್ಟೋ ಕಂಪನಿಗಳು ಇರುತ್ತಿರಲಿಲ್ಲ. ಯುವಜನತೆಗೆ ಉದ್ಯೋಗಾವಕಾಶಗಳೇ ಇಲ್ಲ ಅನ್ನೋ ಪರಿಸ್ಥಿತಿಯೂ ಬಂದಿರುತ್ತಿತ್ತು. ಹೀಗಾಗಿ ಉದ್ಯೋಗಾಕಾಂಕ್ಷಿಯಾಗುವ ಕನಸು ಕಾಣಬೇಡಿ. ಉದ್ದಿಮೆ ಕಟ್ಟುವ ಕನಸು ಕಾಣಿ. ಉದ್ದಿಮೆ ಹೂವಿನ ಹಾಸಿಗೆಯಲ್ಲ ಹಾಗೆಂದು ಕಷ್ಟದ ದಾರಿಯಲ್ಲಿ ನಡೆಯದ ಹೊರತು ಸುಖ ಸಿಗುವುದಕ್ಕೆ ಸಾಧ್ಯವೇ ಇಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಸಂಚಾಲಕ ಮುರಳಿ ಕೃಷ್ಣ ಕೆ. ಎನ್., ಉದ್ಯೋಗ ಸೃಷ್ಟಿಗೆ ಸಾಕಷ್ಟು ಅವಕಾಶಗಳಿವೆ. ಇದನ್ನು ಕಂಡುಕೊಳ್ಳುವ ಕೆಲಸವನ್ನು ಮಾಡಬೇಕು. ಭಿನ್ನವಾದ ರೀತಿಯಲ್ಲಿ ಆಲೋಚನೆ ಮಾಡಿದಾಗ ಯಶಸ್ಸು ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಮತ್ತು ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಹೆಚ್.ಜಿ. ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಸ್ವಾಗತಿಸಿ, ಉಪನ್ಯಾಸಕಿ ಲಕ್ಷ್ಮಿ ಭಟ್ ವಂದಿಸಿದರು. ವಿದ್ಯಾರ್ಥಿನಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.