ಶ್ರೀನಗರ: ಕೆಲ ದಿನಗಳಿಂದ ಶಾಂತಿಯುತವಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದೆ.
ಭಾನುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದಲ್ಲಿ ಓರ್ವ ವೈದ್ಯ ಮತ್ತು ಆರು ಮಂದಿ ಕಾರ್ಮಿಕರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಸುರಂಗದ ಬಳಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆದ ಸ್ಥಳಕ್ಕೆ ಭದ್ರತಾ ಪಡೆಗಳು ತಲುಪಿದ್ದು, ಪ್ರದೇಶವನ್ನು ಸುತ್ತುವರಿದಿವೆ. ಭಯೋತ್ಪಾದಕರಿಗಾಗಿ ಹುಡುಕಾಟ ನಡೆಸಿವೆ. ದಾಳಿಗೊಳಗಾದ ಕಾರ್ಮಿಕರು ಝಡ್ ಮೋರ್ತ್ ಸುರಂಗದಲ್ಲಿ ಕೆಲಸ ಮಾಡುವ ತಂಡದ ಭಾಗವಾಗಿದ್ದರು. ಈ ಸುರಂಗ ಮಾರ್ಗವು ಗಗನೀರ್ನಿಂದ ಮಧ್ಯ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ್ಗೆ ಸಂಪರ್ಕ ಕಲ್ಪಿಸುತ್ತದೆ.
ಕಾರ್ಮಿಕರು ಸುರಂಗದೊಳಗೆ ಕೆಲಸ ಮಾಡುತ್ತಿರುವಾಗಲೇ ಉಗ್ರರು ಆಕ್ರಮಣ ಎಸಗಿದ್ದಾರೆ. ಇಬ್ಬರು ಉಗ್ರರು ದಾಳಿ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಜಮ್ಮು-ಕಾಶ್ಮೀರದ ನೂತನ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.