ಹೊಸದಿಲ್ಲಿ : ವಿಮಾನಗಳಿಗೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಬೆದರಿಕೆ ಕರೆಗಳನ್ನು ಮಾಡಿ ಸಂಚಾರವನ್ನು ಅಸ್ತವ್ಯಸ್ತಗೊಳಿಸುತ್ತಿರುವಾಗಲೇ ಈಗ ಖಲಿಸ್ಥಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಏರ್ ಇಂಡಿಯಾ ವಿಮಾನದಲ್ಲಿ ನವೆಂಬರ್ 1ರಿಂದ 19ರವರೆಗೆ ಪ್ರಯಾಣಿಸಬೇಡಿ ಎಂದು ಬೆದರಿಕೆ ಹಾಕಿದ್ದಾನೆ.
ಸಿಖ್ ನರಮೇಧದ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ಸಂಭವಿಸಬಹುದು ಏಂದು ಪನ್ನುನ್ ಬೆದರಿಕೆ ಸಂದೇಶದಲ್ಲಿ ಹೇಳಿದ್ದಾನೆ.
ಕಳೆದ ವರ್ಷವೂ ಖಲಿಸ್ಥಾನಿ ಉಗ್ರರು ಏರ್ ಇಂಡಿಯಾಕ್ಕೆ ಇದೇ ರೀತಿಯ ಬೆದರಿಕೆ ಹಾಕಿದ್ದರು. ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮರುನಾಮಕರಣ ಮಾಡಲಾಗುವುದು ಮತ್ತು ನವೆಂಬರ್ 19ರಂದು ಮುಚ್ಚಲಾಗುವುದು ಎಂದು ಬೆದರಿಕೆಯೊಡ್ಡಿದ ವೀಡಿಯೊವನ್ನು ಪನ್ನುನ್ ಬಿಡುಗಡೆ ಮಾಡಿದ್ದ. ಈ ವರ್ಷದ ಗಣರಾಜ್ಯೋತ್ಸವದಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು.ಆದರೆ ಏನೂ ಸಂಭವಿಸಿರಲಿಲ್ಲ. ಆದರೂ ಸರಕಾರ ಪನ್ನುನ್ ಹಾಕಿರುವ ಹೊಸ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ.
ದೇಶದ್ರೋಹ ಮತ್ತು ಪ್ರತ್ಯೇಕತಾವಾದದ ಆರೋಪದ ಮೇಲೆ ಗುರುಪರ್ವಂತ್ ಸಿಂಗ್ ಪನ್ನನ್‌ನನ್ನು ಜುಲೈ 2020ರಲ್ಲಿ ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದಕ ಎಂದು ಘೋಷಿಸಿದೆ. ಭಾರತ ಮತ್ತು ಕೆನಡದ ದ್ವಿಪೌರತ್ವ ಹೊಂದಿರುವ ಪನ್ನುನ್ ಪ್ರಸ್ತುತ ಕೆನಡದಲ್ಲೆ ಇದ್ದಾನೆ ಎನ್ನಲಾಗಿದೆ. ಭಾರತದಲ್ಲಿ ನಿರಂತರವಾಗಿ ಖಲಿಸ್ಥಾನಿ ಪ್ರತ್ಯೇಕವಾದ ಚಟುವಟಿಕೆಗಳನ್ನು ಆತ ನಡೆಸುತ್ತಿದ್ದಾನೆ.
ಭಾರತದಲ್ಲಿ ವಿಮಾನಗಳಿಗೆ ಕಳೆದ ಎರಡು ವಾರಗಳಲ್ಲಿ 70ಕ್ಕೂ ಅಧಿಕ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದು ಆಗಾಗ ಸೇವೆ ವ್ಯತ್ಯಯವಾಗಿದೆ. ಇದರ ನಡುವೆ ಕೆನಡ ಮತ್ತು ಭಾರತ ನಡುವಿನ ರಾಜತಾಂತ್ರಿಕ ಸಂಬಂದವೂ ಹದಗೆಟ್ಟಿದೆ. ಈ ನಡುವೆ ಪನ್ನುನ್ ಬೆದರಿಕೆ ಹಾಕಿರುವುದರಿಂದ ಭದ್ರತಾ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸಿವೆ.