ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ತಿರುವನಂತಪುರ: ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಮುಸ್ಲಿಂ ಲೀಗ್ ಅಭ್ಯರ್ಥಿ ಪ್ರಿಯಾಂಕ ಗಾಂಧಿ ವಾಡ್ರಾ ವಿರುದ್ಧ ಬಿಜೆಪಿ ತನ್ನ ಫಯರ್ ಬ್ರಾಂಡ್ ನಾಯಕಿ ನವ್ಯಾ ಹರಿದಾಸ್ ಅವರನ್ನು ಕಣಕ್ಕಿಳಿಸಿದೆ.
ರಾಯ್ಬರೇಲಿ ಮತ್ತು ವಯನಾಡು ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ ವಯನಾಡಿನ ಬದಲು ರಾಯ್ಬರೇಲಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಕಾರಣದಿಂದ ತೆರವಾಗಿದ್ದ ಕೇರಳದ ವಯನಾಡು ಕ್ಷೇತ್ರದ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.
ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ವಯನಾಡು ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿರುದ್ಧ ನವ್ಯಾ ಹರಿದಾಸ್ ಅವರನ್ನು ಕಣಕ್ಕಿಳಿಸಿದೆ. ಕಳೆದ ಮೇ ತಿಂಗಳಲ್ಲಿ ನಡೆದ ಸಾರ್ವತ್ರಕಿ ಚುನಾವಣೆಯಲ್ಲಿ ವಯನಾಡು ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಸ್ಪರ್ಧಿಸಿದ್ದರು.
ಕೇರಳದ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಗೆ ಸವಾಲು ಹಾಕಲು ಹೊರಟಿರುವ 39 ವರ್ಷದ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಪಕ್ಷದ ಡೈನಾಮಿಕ್ ನಾಯಕರಲ್ಲಿ ಒಬ್ಬರು. ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ನವ್ಯಾ 2007ರಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಅವರು ಕೋಝಿಕ್ಕೋಡ್ ಕಾರ್ಪೊರೇಶನ್‌ನ ಕೌನ್ಸಿಲರ್ ಆಗಿದ್ದಾರೆ. ಹಾಗೇ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಿಂದ ವಿಧಾನಸಭಾ ಉಪಚುನಾವಣೆಗೆ ಕೂಡ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. 8 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಪಕ್ಷವು 24 ಅಭ್ಯರ್ಥಿಗಳನ್ನು ಹೆಸರಿಸಿದೆ. ಮಾಜಿ ಸಂಸದ ಸುನಿಲ್ ಸೋನಿ ಛತ್ತೀಸ್‌ಗಢದ ರಾಯ್‌ಪುರ ನಗರ ದಕ್ಷಿಣ ವಿಧಾನಸಭೆಯಿಂದ ಸ್ಪರ್ಧಿಸಲಿದ್ದಾರೆ.
ನವೆಂಬರ್ 13ರಂದು ಲೋಕಸಭಾ ಉಪಚುನಾವಣೆಗೆ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.