ಉಳ್ಳಾಲ ಸಮೀಪ ರೈಲು ಹಳಿತಪ್ಪಿಸುವ ಯತ್ನ?

ರಾತ್ರಿ ಹಳಿ ಮೇಲೆ ಜಲ್ಲಿಕಲ್ಲು ಸುರಿದ ದುಷ್ಕರ್ಮಿಗಳು

ಮಂಗಳೂರು : ಕಳೆದ ಕೆಲ ದಿನಗಳಿಂದ ದೇಶದ ಅಲ್ಲಲ್ಲಿ ದುಷ್ಕರ್ಮಿಗಳು ಹಳಿಯ ಮೇಲೆ ಗ್ಯಾಸ್‌ ಸಿಲಿಂಡರ್‌, ಮರದ ತುಂಡು, ಕಬ್ಬಿಣದ ಸರಳು ಇತ್ಯಾದಿಗಳನ್ನು ಇಟ್ಟು ರೈಲುಗಳ ಹಳಿ ತಪ್ಪಿಸಲು ಯತ್ನಿಸಿದ ಹಲವು ಘಟನೆಗಳು ವರದಿಯಾಗಿವೆ. ಬಹುತೇಕ ಘಟನೆಗಳಲ್ಲಿ ಚಾಲಕರ ಸಮಯ ಪ್ರಜ್ಞೆಯಿಂದಾಗಿ ದುರಂತಗಳು ಕೂದಲೆಳೆಯ ಅಂತರದಲ್ಲಿ ತಪ್ಪಿವೆ. ಈಗ ಇದೇ ಮಾದರಿಯ ಪ್ರಯತ್ನವೊಂದು ಮಂಗಳೂರು ಸಮೀಪ ತೊಕ್ಕೊಟ್ಟುವಿನಲ್ಲಿ ನಡದಿರುವ ಅನುಮಾನ ಉಂಟಾಗಿದೆ.

ಮಂಗಳೂರಿನಿಂದ ಕೇರಳಕ್ಕೆ ಹೋಗುವ ಮಾರ್ಗದಲ್ಲಿ ಉಳ್ಳಾಲದ ಬಳಿ ಹಳಿ ಮೇಲೆ ದುಷ್ಕರ್ಮಿಗಳು ಜಲ್ಲಿಕಲ್ಲು ಸುರಿದು ರೈಲು ಅವಘಡ ಸಂಭವಿಸುವಂತೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ರೈಲು ಹಳಿಯ ಎರಡೂ ಬದಿಗಳಲ್ಲಿ ದುಷ್ಕರ್ಮಿಗಳಿಬ್ಬರು ಜಲ್ಲಿಕಲ್ಲುಗಳನ್ನಿಟ್ಟ ಪರಿಣಾಮ ಎರಡು ರೈಲುಗಳು ಚಲಿಸುವ ಸಂದರ್ಭ ದೊಡ್ಡ ಸದ್ದು ಸ್ಥಳೀಯರಿಗೆ ಕೇಳಿಬಂದಿದ್ದು, ಸ್ಥಳೀಯರು ರೈಲು ಹಳಿಯತ್ತ ದೌಡಾಯಿಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಕೊರಗಜ್ಜನ ಅಗೆಲು ಮುಗಿಸಿ ವಾಪಸ್ಸಾಗುತ್ತಿದ್ದಾಗ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿವಾಸಿ ಮಹಿಳೆಯರು ಹಳಿಯಲ್ಲಿ ಇಬ್ಬರು ಅಪರಿಚಿತರನ್ನು ಕಂಡಿದ್ದರು.



































 
 

ಅಲ್ಲಿಂದ ಮನೆಗೆ ತಲುಪುವಷ್ಟರಲ್ಲಿ ರೈಲೊಂದು ಕೇರಳ ಕಡೆಗೆ ತೆರಳಿತ್ತು. ಈ ವೇಳೆ ದೊಡ್ಡ ಸದ್ದು ಕೇಳಿಸಿತ್ತು. ಅದನ್ನು ಸ್ಥಳೀಯರು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಳಿಕ ಇನ್ನೊಂದು ರೈಲು ಚಲಿಸುವಾಗ ಮತ್ತೊಮ್ಮೆ ದೊಡ್ಡ ಸದ್ದು ಕೇಳಿದೆ. ಇದರ ಪರಿಣಾಮವಾಗಿ ಸ್ಥಳೀಯ ಕೆಲವು ಮನೆಗಳಲ್ಲೂ ಸಣ್ಣ ಕಂಪನ ಉಂಟಾಗಿತ್ತು. ತಕ್ಷಣ ರೈಲು ಅಪಘಾತವೆಂದು ಭಾವಿಸಿ ಹಳಿಯತ್ತ ದೌಡಾಯಿಸಿದಾಗ ಹಳಿ ಮೇಲಿರಿಸಲಾದ ಜಲ್ಲಿಕಲ್ಲುಗಳು ತುಂಡಾಗಿರುವುದು ಕಂಡುಬಂದಿದೆ.

40 ವರ್ಷಗಳಿಂದ ತೊಕ್ಕೊಟ್ಟು ಪರಿಸರದಲ್ಲಿ ನೆಲೆಸಿದ್ದೇವೆ. ಆದರೆ ರೈಲು ದಾಟುವಾಗ ಕಂಪನದ ಅನುಭವ ಇದೇ ಮೊದಲ ಬಾರಿಗೆ ಆಗಿದೆ ಎಂದು ಸ್ಥಳೀಯ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಈ ಕುರಿತು ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಓವರ್ ಬ್ರಿಡ್ಜ್ ಕೆಳಗಡೆ ನಿತ್ಯ ಅಪರಿಚಿತರು ಬಂದು ಕುಳಿತು ಮದ್ಯಪಾನ ಮಾಡುತ್ತಾರೆ ಎನ್ನಲಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳು ಇವೆ. ಇದೀಗ ಸಂಭಾವ್ಯ ಅನಾಹುತ ತಪ್ಪಿದೆ. ಮುಂದೊಂದು ದಿನ ಅಪಾಯ ನಡೆಯುವ ಮುನ್ನ ಎಚ್ಚೆತ್ತು, ಸಂಬಂಧಪಟ್ಟ ಇಲಾಖೆ ಸಿಸಿಟಿವಿ ಅಳವಡಿಸಬೇಕು ಅನ್ನುವ ಆಗ್ರಹ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ರೈಲ್ವೆ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top