ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಜಂಕ್ಷನ್ ನಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರಿಗೆ ಇಬ್ಬರು ಸೇರಿಕೊಂಡು ಗಂಭೀರ ಹಲ್ಲೆ ನಡೆಸಿದ ಘಟನೆ ಭಾನುವಾರ ಸಂಜೆ ಸಂಭವಿಸಿದೆ.
ಸ್ಥಳೀಯ ನಿವಾಸಿ, ಕಾಂಗ್ರೆಸ್ ಮುಖಂಡರಾದ ರಘುನಾಥ ರೈ ಎಂಬವರ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದೆ. ತಿಂಗಳಾಡಿಯ ಅಂಗಡಿಯೊಂದರ ಬಳಿ ರಘುನಾಥ ರೈ ಅವರು ನಿಂತಿದ್ದಾಗ ಅಲ್ಲಿಗೆ ಬಂದ ಯುವಕರಿಬ್ಬರು ಮಾತಿಗೆ ಮಾತು ಬೆಳೆಸಿ ಹಲ್ಲೆ ಮಾಡಿದ್ದಾರೆ. ತಲೆಯನ್ನು ಹಿಡಿದು ಗೋಡೆಗೆ ಜಜ್ಜಿದ್ದು ಗಂಭೀರ ಗಾಯಗೊಂಡ ರಘುನಾಥ ರೈ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಜಾಗದ ತಕರಾರಿಗೆ ಸಂಬಂಧಿಸಿ ಈ ಹಲ್ಲೆ ನಡೆದಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.