ಪುತ್ತೂರು: ಭಾನುವಾರ ಸಂಜೆ ಸುರಿದ ಭಾರೀ ಮಳೆಯ ಸಂದರ್ಭ ಸಿಡಿಲು ಬಡಿದು ಮನೆಯೊಂದಕ್ಕೆ ಅಪಾರ ಹಾನಿ ಉಂಟಾದ ಘಟನೆ ತಾಲೂಕಿನ ಅರಿಯಡ್ಕ ಗ್ರಾಮದ ಪಾಪೆಮಜಲು ಸಮೀಪದ ಪಾದಲಾಡಿ ಎಂಬಲ್ಲಿ ಸಂಭವಿಸಿದೆ.
ಪಾದಲಾಡಿ ನಿವಾಸಿ ಶೇಖರ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದಿದೆ. ಗೋಡೆ ಬಿರುಕು ಬಿಟ್ಟಿದ್ದು ಟಿವಿ, ಫ್ರಿಜ್ ಮತ್ತಿತರ ಇಲೆಕ್ಟ್ರಾನಿಕ್ ಸೊತ್ತುಗಳು ಸುಟ್ಟು ಹೋಗಿವೆ. ವಿದ್ಯುತ್ ಲೈನ್ ಕೂಡಾ ಸುಟ್ಟು ಹೋಗಿದೆ.
ಮನೆಯ ಹೊರಗೆ ಅಂಗಳದಲ್ಲಿದ್ದ ಸಾಕು ನಾಯಿ ಸಿಡಿಲಾಘಾತದಲ್ಲಿ ಮೃತಪಟ್ಟಿದೆ. ಸುಮಾರು ಐವತ್ತು ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ. ವಲಯ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಅವರು ಮನೆಗೆ ಭೇಟಿ ನೀಡಿ ನಷ್ಟ ಪರಿಶೀಲನೆ ನಡೆಸಿದ್ದಾರೆ.