ಕ್ರಿಕೆಟಿನ ಡಾನ್ – ಬ್ರಾಡ್ಮನ್

ಯಾರೂ ಬ್ರೇಕ್ ಮಾಡಲು ಆಗದ ಅಪೂರ್ವ ದಾಖಲೆಗಳ ಸರದಾರ

ಆಗಸ್ಟ್ 14, 1948. ಇಂಗ್ಲೆಂಡಿನ ಮಹೋನ್ನತ ಓವಲ್ ಕ್ರಿಕೆಟ್ ಗ್ರೌಂಡ್, ಅದು ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಗಳ ಮುಖಾಮುಖಿ.
ಆಶಸ್ ಸರಣಿಯ ಕೊನೆಯ ಪಂದ್ಯ ಅನ್ನುವುದಕ್ಕಿಂತ ಆ ಲೆಜೆಂಡ್ ಕ್ರಿಕೆಟರ್‌ನ ಕೊನೆಯ ಟೆಸ್ಟ್ ಪಂದ್ಯ ಅನ್ನೋದು ಹೆಚ್ಚು ಸರಿ. ಆತ ಬ್ಯಾಟಿಂಗ್ ಮಾಡಲು ಬ್ಯಾಟ್ ಹಿಡಿದು ಬರುವಾಗ ಇನ್ನೊಂದು ಕುತೂಹಲ ಇತ್ತು.
ಆತ ಅಂದು ಕೇವಲ ನಾಲ್ಕು ರನ್ ಮಾಡಿದ್ದರೆ ಆತನ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಸರಾಸರಿ 100 ಆಗುತ್ತಿತ್ತು. ಅದು ಕ್ರಿಕೆಟ್ ದಾಖಲೆಗಳ ಮೌಂಟ್ ಎವರೆಸ್ಟ್ ದಾಖಲೆಯೇ ಆಗುತ್ತಿತ್ತು. ಅದಕ್ಕಾಗಿ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಮೈದಾನ ತುಂಬಾ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದರು. ಆಗ ಕ್ರಿಕೆಟ್ ಟಿವಿಯಲ್ಲಿ ನೇರ ಪ್ರಸಾರ ಇರಲಿಲ್ಲ.

ಶತಕದ ಸರಾಸರಿ ಕೈಗೂಡಲೆ ಇಲ್ಲ



































 
 

ಬ್ಯಾಟಿಂಗ್ ಕ್ರೀಸಿಗೆ ಬಂದು ನಿಂತು ಇಂಗ್ಲೆಂಡ್‌ನ ಬೌಲರ್ ಎರಿಕ್ ಹೊಲ್ಲೀಸನ ಎರಡನೇ ಬಾಲಿಗೆ ಔಟ್ ಆದಾಗ ಆತನು ರನ್ ಖಾತೆಯನ್ನು ತೆರೆದಿರಲಿಲ್ಲ. ಅಲ್ಲಿಗೆ ಆತನ ಬ್ಯಾಟಿಂಗ್ ಅವರೇಜ್ 99.96ಕ್ಕೆ ಬಂದು ನಿಂತುಬಿಟ್ಟಿತು. ಎಲ್ಲರಿಗೂ ಒಮ್ಮೆಗೇ ನಿರಾಸೆ ಆದರೂ ಆ ಸರಾಸರಿ ಮುಂದೆ ಸಾವಿರಾರು ವರ್ಷ ಅಬಾಧಿತವಾಗಿ ಉಳಿಯುತ್ತದೆ ಎಂದು ಖಚಿತವಾಗಿ ಗೊತ್ತಿತ್ತು.
ಆತ ಆಸ್ಟ್ರೇಲಿಯಾದ ಲೆಜೆಂಡ್ ಕ್ರಿಕೆಟರ್ ಡಾನ್ ಬ್ರಾಡ್ಮನ್.

ದಾಖಲೆಗಳ ಮಹಾರಾಜ ಅಂದರೆ ಅದು ಸರಿ

ಆತನಿಗೆ ಸರಿಸಮನಾದ ಇನ್ನೊಬ್ಬ ಕ್ರಿಕೆಟರ್ ಆನಂತರದಲ್ಲಿ ಹುಟ್ಟಿಲ್ಲ ಅಂದರೆ ಅದು ಕೂಡ ಸರಿ. ಕ್ರಿಕೆಟ್ ಇತಿಹಾಸ ಆತನ ಸಾಧನೆಯನ್ನು ಉಲ್ಲೇಖ ಮಾಡದೆ ಮುಂದೆ ಹೋಗುವುದೇ ಇಲ್ಲ.

1928-1948ರ ಅವಧಿಯಲ್ಲಿ ಈ ಬಲಿಷ್ಠ ಬಲಗೈ ಆಟಗಾರ ಜಾಗತಿಕ ಕ್ರಿಕೆಟನ್ನು ವಸ್ತುಶಃ ಆಳಿದ್ದ. ಸ್ವಲ್ಪ ಗಮನಿಸಿ, ಆ ಅವಧಿಯಲ್ಲಿ ಎರಡನೇ ವಿಶ್ವ ಸಮರದ ಕಾರಣಕ್ಕೆ ಕೆಲವು ವರ್ಷ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿರಲಿಲ್ಲ.

ಒಟ್ಟು ಟೆಸ್ಟ್ ಪಂದ್ಯಗಳು – 52.
ಇನ್ನಿಂಗ್ಸ್ ಸಂಖ್ಯೆ – 80.
ಶತಕಗಳ ಸಂಖ್ಯೆ – 29.
ದ್ವಿಶತಕಗಳ ಸಂಖ್ಯೆ -12.
ತ್ರಿಶತಕಗಳ ಸಂಖ್ಯೆ 2.
ಬ್ಯಾಟಿಂಗ್ ಸರಾಸರಿ -99.94.

ಅದರಲ್ಲಿ ಎರಡು ದಾಖಲೆಗಳು ಇಂದಿಗೂ ಅಬಾಧಿತವಾಗಿ ಉಳಿದಿವೆ. ಒಂದು ದ್ವಿಶತಕಗಳ ಸಂಖ್ಯೆ. ಮತ್ತೊಂದು ಬ್ಯಾಟಿಂಗ್ ಸರಾಸರಿ.
99.94 ಸರಾಸರಿಯ ಹತ್ತಿರ ಯಾವ ಬ್ಯಾಟ್ಸ್‌ಮ್ಯಾನ್‌ ಕೂಡ ಈವರೆಗೆ ಬಂದಿಲ್ಲ, ಮುಂದೆಯೂ ಬರುವ ಚಾನ್ಸ್ ಇಲ್ಲ. ಅವರದ್ದೇ ರಾಷ್ಟ್ರದ ಆಡಮ್ ವೋಗ್ಸ್ ಬ್ಯಾಟಿಂಗ್ ಸರಾಸರಿ ಈಗ ಎರಡನೆಯ ಸ್ಥಾನದಲ್ಲಿ ಇದೆ (61.87).

ಕೇವಲ 5 ಅಡಿ 7 ಇಂಚು ಎತ್ತರದ ಈ ಬ್ಯಾಟಿಂಗ್ ಲೆಜೆಂಡ್ ಹೆಸರಲ್ಲಿ ಇನ್ನೂ ಮುರಿಯದ ಅಸಂಖ್ಯ ದಾಖಲೆಗಳು ಇವೆ. ಅವುಗಳಲ್ಲಿ ಕೆಲವನ್ನು ಉಲ್ಲೇಖ ಮಾಡಿದರೆ ನಿಮಗೆ ಆತನ ಸಾಧನೆಯ ಎತ್ತರ ವೇದ್ಯ ಆಗಬಹುದು. ಆಗಿನ ಕಾಲದಲ್ಲಿ ಟೆಸ್ಟ್ ಕ್ರಿಕೆಟ್ ಮಾತ್ರ ಇದ್ದ ಕಾರಣ ಆತನ ದಾಖಲೆಗಳು ಟೆಸ್ಟ್ ಕ್ರಿಕೆಟಿಗೆ ಸೀಮಿತ ಆಗಿವೆ ಮತ್ತು ಆಗಿನ ಕಾಲದಲ್ಲಿ ವರ್ಷವಿಡೀ ಕ್ರಿಕೆಟ್ ಪಂದ್ಯಗಳು ನಡೆಯುತ್ತಿರಲಿಲ್ಲ.

1) ಅತಿ ಎತ್ತರದ ಬ್ಯಾಟಿಂಗ್ ಸರಾಸರಿ 99.94

2) ಕೇವಲ 52 ಟೆಸ್ಟ್ ಪಂದ್ಯಗಳಲ್ಲಿ 6996 ರನ್ ಪರ್ವತ, 29 ಶತಕಗಳು

3) ಅತಿ ಹೆಚ್ಚು ದ್ವಿ ಶತಕಗಳು -12

4) ಅತಿ ಹೆಚ್ಚು ತ್ರಿಶತಕಗಳು – 2 (ಈಗ ಲಾರಾ, ಕ್ರಿಸ್ ಗೇಲ್ ಮತ್ತು ಸೆಹವಾಗ್ ಕೂಡ ಈ ದಾಖಲೆ ಹೊಂದಿದ್ದಾರೆ).

5) ಟೆಸ್ಟ್ ಸರಣಿಯ ಸರಾಸರಿ ಸ್ಕೋರ್ – 201.50

6) ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಸ್ಕೋರ್ – 974. (ಆಗಿನ ಬಲಿಷ್ಠ ಟೀಮ್ ಇಂಗ್ಲೆಂಡಿನ ವಿರುದ್ಧ)

7) ಒಂದೇ ದಿನದ ಅವಧಿಯಲ್ಲಿ 309 ರನ್ ಶಿಖರ

8) ಒಂದೇ ರಾಷ್ಟ್ರದ ವಿರುದ್ಧ ಅತಿ ಹೆಚ್ಚು ರನ್ – 5028 ಅದು ಕೂಡ ಇಂಗ್ಲೆಂಡಿನ ವಿರುದ್ಧ

9) ಕೇವಲ 45 ಟೆಸ್ಟ್ ಪಂದ್ಯಗಳಲ್ಲಿ 6000+ ರನ್

10) ಪ್ರಥಮ ದರ್ಜೆ ಕ್ರಿಕೆಟಲ್ಲಿ ಯಾರೂ ಮುರಿಯಲು ಸಾಧ್ಯ ಆಗದ ದಾಖಲೆ – 669 ಇನ್ನಿಂಗ್ಸ್, 50,731 ರನ್, 211 ಶತಕಗಳು, 90.27 ಸರಾಸರಿ

ಈ ದಾಖಲೆಗಳ ಹೊತ್ತಿಗೆ ಇಂಗ್ಲೆಂಡಿನ ಮತ್ತು ನ್ಯೂಜಿಲೆಂಡಿನ ತಂಡಗಳು ಬಾಡಿಲೈನ್ ಬೌಲಿಂಗ್ ಕಾರಣಕ್ಕೆ ಅಪಕೀರ್ತಿ ಹೊಂದಿದ್ದವು. ಅಂದರೆ ಬ್ಯಾಟ್ಸ್‌ಮ್ಯಾನ್ ದೇಹಕ್ಕೆ ಗುರಿ ಇಟ್ಟು ಬೌಲಿಂಗ್ ಮಾಡುವ ಅಪಾಯಕಾರಿ ಬೌಲರ್ಸ್‌ಗಳು. ಅತ್ಯಂತ ವೇಗದ ಬೌಲರ್‌ಗಳು ಕೂಡ ಇದ್ದರು. ಬ್ರಾಡ್ಮನ್ ಎತ್ತರವು ತುಂಬ ಕಡಿಮೆ ಇತ್ತು. ಆದರೂ ಈ ದಾಖಲೆಗಳ ಪರ್ವತ ಆತನಿಗೆ ಸಾಧ್ಯ ಆಯ್ತು ಅಂದರೆ ನನಗೆ ವಿಸ್ಮಯ ಮೂಡುತ್ತದೆ.

ಇನ್ನೂ ಮೂರು ಅಂಶಗಳನ್ನು ನೀವು ಗಮನಿಸಬೇಕು

ಬ್ರಾಡ್ಮನ್ ಶತಕ ಪೂರ್ತಿ ಮಾಡುವ ಸಂದರ್ಭ 90-99ರ ಗಡಿಯಲ್ಲಿ ಒಮ್ಮೆಯೂ ಔಟ್ ಆಗಿಲ್ಲ. ದ್ವಿಶತಕ ಪೂರ್ತಿ ಮಾಡುವ ಹೊತ್ತಿನಲ್ಲಿ ಒಮ್ಮೆಯೂ 190-199ರ ನಡುವೆ ಔಟ್ ಆಗಿಲ್ಲ. ತ್ರಿಶತಕವನ್ನು ಪೂರ್ತಿ ಮಾಡುವ ದಾರಿಯಲ್ಲಿ ಒಮ್ಮೆಯೂ 290-299 ಗಡಿಯಲ್ಲಿ ಔಟ್ ಆಗಿಲ್ಲ. ಇದು ಡಾನ್ ಬ್ರಾಡ್ಮನ್ ನಿಖರತೆಯನ್ನು ಎತ್ತಿ ತೋರಿಸುತ್ತದೆ.

ಸಚಿನ್ – ಬ್ರಾಡ್ಮನ್ ಮುಖಾಮುಖಿ

1998ರಲ್ಲಿ ಸಚಿನ್ ತನ್ನ ಕ್ರಿಕೆಟ್ ಕೆರಿಯರ್‌ನ ಶಿಖರದಲ್ಲಿ ಇದ್ದಾಗ ಡಾನ್ ಬ್ರಾಡ್ಮನ್ ಆತನನ್ನು ಸ್ವತಃ ಕಾಲ್ ಮಾಡಿ ಆಸ್ಟ್ರೇಲಿಯಾಕ್ಕೆ ಕರೆಸುತ್ತಾರೆ. ಅದು ಲೆಜೆಂಡ್ ಆಟಗಾರನ 90ನೆಯ ಹುಟ್ಟುಹಬ್ಬ ಆಗಿತ್ತು.
ಅಂದು ಬ್ರಾಡ್ಮನ್ ಸಚಿನ್‌ಗೆ ತಾನು ಬಳಸಿದ ಒಂದು ಬ್ಯಾಟ್ ಸಹಿ ಮಾಡಿ ಉಡುಗೊರೆ ಕೊಡುತ್ತಾರೆ. ಪಕ್ಕದಲ್ಲಿದ್ದ ತನ್ನ ಹೆಂಡತಿಗೆ
‘ನೋಡೇ, ಇವನು ನನ್ನ ಹಾಗೆ ಬ್ಯಾಟಿಂಗ್ ಮಾಡ್ತಾ ಇದ್ದಾನೆ’ ಎಂದು ಪರಿಚಯ ಮಾಡುತ್ತಾರೆ.

ಸಚಿನ್ ಆ ಭೇಟಿಯ ಬಗ್ಗೆ ಹೇಳಿರುವುದು ಇಷ್ಟು

“ನಾನು ನರ್ವಸ್ ಆಗಿದ್ದೆ. ಮೌಂಟ್ ಎವರೆಸ್ಟ್ ಎದುರು ನಿಂತ ಹಾಗೆ ಫೀಲ್ ಆಗುತ್ತಿತ್ತು. ನಾನು ನಿಮ್ಮ ಯಶಸ್ಸಿನ ಗುಟ್ಟು ಏನು ಎಂದು ಅವರನ್ನು ಕೇಳಿದೆ. ಅದಕ್ಕೆ ಡಾನ್ ಹೇಳಿದ್ದು ಇಷ್ಟೇ, ನಾನು ಪ್ರತಿ ಬಾರಿ ಬ್ಯಾಟಿಂಗ್ ಮಾಡಲು ಹೋಗುವಾಗ ಅದು ನನ್ನ ಜೀವನದ ಮೊದಲ ಇನ್ನಿಂಗ್ಸ್ ಎಂದು ನಿರ್ಧರಿಸಿ ಆಡಲು ಹೋಗುವುದು ಮತ್ತು ನಾನು ಎದುರಿಸುವ ಪ್ರತಿ ಎಸೆತ ಕೂಡ ನನ್ನ ಜೀವನದ ಮೊದಲ ಎಸೆತ ಎಂದು ನಿರ್ಧರಿಸಿ ಆಡುವುದು”.

ಅಂದ ಹಾಗೆ ಡಾನ್ ಬ್ರಾಡ್ಮನ್ 2001ರಲ್ಲಿ ನಿಧನರಾದಾಗ ಆತನಿಗೆ 92 ವರ್ಷ ಆಗಿತ್ತು. ಅಲ್ಲಿ ಕೂಡ ಶತಕಕ್ಕೆ ಎಂಟು ವರ್ಷ ಕೊರತೆ ಆಯಿತು.

ಬ್ರಾಡ್ಮನ್ ಕ್ರಿಕೆಟಿನ ‘ಸಹಸ್ರಮಾನದ ಲೆಜೆಂಡ್’ ಅನ್ನುವ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top