ಬೆಳ್ತಂಗಡಿ: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಪರವಾಗಿ ಉಜಿರೆ, ಬೆಳಾಲು ಹಾಗೂ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ ಹಾಗೂ ಚುನಾವಣಾ ಸಭೆ ನಡೆಸಲಾಯಿತು.
ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮತದಾನ ಎನ್ನುವುದು ದೇಶದ ಸಂವಿಧಾನ ನಮಗೆ ಕಲ್ಪಿಸಿದ ಹಕ್ಕು. ಚುನಾವಣೆಯ ದಿನ ನಮ್ಮ ಕರ್ತವ್ಯ ನಿರ್ವಹಿಸಲು ಕಡ್ಡಾಯ ಮತದಾನ ಮಾಡಬೇಕು. ಸ್ಥಳೀಯ ಪ್ರಾಧಿಕಾರದ ಉಪ ಚುನಾವಣೆಯ ದಿನ ಎಲ್ಲಾ ಮತದಾರರೂ ಕಿಶೋರ್ ಕುಮಾರ್ ಪುತ್ತೂರು ಪರ ಮತ ಚಲಾಯಿಸುಂತೆ ಹೇಳಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಕಿಶೋರ್ ಕುಮಾರ್ ಅವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದು, ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರು. ಹಿಂದುತ್ವ ಮತ್ತು ರಾಷ್ಟ್ರೀಯತೆಯ ವಿಚಾರದಲ್ಲಿ ರಾಜಿ ಇಲ್ಲದ ಅವರ ನಿಲುವು ಉತ್ತಮ ನಾಯಕತ್ವದ ಲಕ್ಷಣ. ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ ಅವರನ್ನು ಜನಪ್ರತಿನಿಧಿಯಾಗಿ ಅವಕಾಶ ಕಲ್ಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಚುನಾವಣೆಗೆ ಕೆಲವು ದಿನಗಳು ಬಾಕಿ ಉಳಿದಿದ್ದು ಎಲ್ಲರೂ ಒಂದಾಗಿ ಅವರನ್ನು ಗೆಲ್ಲಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ಮಂಡಲ ಅದ್ಯಕ್ಷ ಶ್ರೀನಿವಾಸ್ ಪುಟಾಣಿ, ಸ್ಥಳೀಯ ಬಿಜೆಪಿ ಮುಖಂಡರಾದ ಪ್ರಶಾಂತ್ ಪೇರೆಂಕಿ ಜಯಾನಂದ ಗೌಡ ಸೀತಾರಾಮ್ ಬೆಳಾಲು ಅಜಿತ್ ಇಂದಬೆಟ್ಟು ಉಪಸ್ಥಿತರಿದ್ದರು.