ಪ್ರಹ್ಲಾದ ಜೋಶಿ ಸಹೋದರ-ಸಹೋದರಿ ವಿರುದ್ಧ 2 ಕೋಟಿ ರೂ. ವಂಚನೆ ದೂರು

ನನಗೆ ಸಹೋದರಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ ಜೋಶಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯಲಕ್ಷ್ಮೀ ಜೋಶಿ ಸೇರಿ ಮೂವರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯಲಕ್ಷ್ಮಿ ಜೋಶಿ ಹಾಗೂ ಗೋಪಾಲ್ ಜೋಶಿ ಮಗ ಅಜಯ್ ಜೋಶಿ ಭರವಸೆ ನೀಡಿ ಎರಡು ಕೋಟಿ ರೂಪಾಯಿ ಪಡೆದು ಟಿಕೆಟ್ ಕೊಡಿಸದೆ ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆಂದು ಸುನೀತಾ ಚವ್ಹಾಣ್ ಎಂಬುವವರು ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಸುನೀತಾ ಚವ್ಹಾಣ್‌ ಅವರ ಪತಿ ಮಾಜಿ ಶಾಸಕ ದೇವಾನಂದ್‌ ಫೂಲ್‌ಸಿಂಗ್‌ ಚವ್ಹಾಣ್‌ ಅವರಿಗೆ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್‌ ಕೊಡಿಸುವುದಾಗಿ ಹೇಳಿ ಗೋಪಾಲ್‌ ಜೋಶಿ 25 ಲಕ್ಷ ರೂ. ಹಾಗೂ 5 ಕೋಟಿ ರೂ. ಚೆಕ್‌ ಮುಂಗಡವಾಗಿ ಪಡೆದಿದ್ದರು ಎಂದು ಆರೋಪಿಸಿದ್ದಾರೆ. ಅಥಣಿಯಲ್ಲಿ ಎಂಜಿನಿಯರ್‌ ಆಗಿದ್ದ ಶೇಖರ್‌ ನಾಯಕ್‌ ಎಂಬುವರ ಮೂಲಕ ಗೋಪಾಲ್‌ ಜೋಶಿಯವರ ಪರಿಚಯವಾಗಿತ್ತು. ಗೋಪಾಲ್‌ ಜೋಶಿ ಸೂಚಿಸಿದಂತೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಅವರ ಸಹೋದರಿ ವಿಜಯಲಕ್ಷ್ಮಿ ಅವರ ಮನೆಗೆ ಹಣ ಹಾಗೂ ಚೆಕ್‌ ತೆಗೆದುಕೊಂಡು ಹೋಗಿ ಕೊಟ್ಟಿದ್ದೆವು. ಆಗ ಸಹೋದರಿಯ ಮನೆಯಲ್ಲೇ ಇದ್ದ ಗೋಪಾಲ್‌ ಜೋಶಿ, ಕೇಂದ್ರ ಸಚಿವ ಅಮಿತ್‌ ಶಾ ಅವರ ಆಪ್ತ ಸಹಾಯಕರಿಗೆ ಕರೆ ಮಾಡಿ ಮಾತನಾಡಿದಂತೆ ನಟಿಸಿದ್ದರು. ಅಲ್ಲದೆ, ಬಿಜೆಪಿ ಟಿಕೆಟ್‌ ಖಚಿತವಾಗಿರುವುದಾಗಿ ನಂಬಿಸಿ ಹೇಳಿ ಹಂತಹಂತವಾಗಿ 2 ಕೋಟಿ ರೂ. ಪಡೆದಿದ್ದಾರೆ. ಟಿಕೆಟ್ ಸಿಗದ ಬಳಿಕ ಹಣ ವಾಪಸ್ ಕೇಳಿದಾಗ ಕಾರಣಗಳನ್ನು ಹೇಳಲು ಶುರು ಮಾಡಿದರು. 200 ಕೋಟಿ ರೂ.ಗಳ ಯೋಜನೆಯ ಬಿಲ್ ಬಾಕಿಯಿದ್ದು, ಹಣವನ್ನು ಒಟ್ಟಿಗೆ ಹಿಂದಿರುಗಿಸುವುದಾಗಿ ಹೇಳಿದರು. ಆಗಸ್ಟ್ 1ರಂದು ವಿಜಯಲಕ್ಷ್ಮಿಅವರ ನಿವಾಸಕ್ಕೆ ಭೇಟಿ ನೀಡಿದಾಗ ನನ್ನ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದರು. ಅಲ್ಲದೆ, ನನಗೆ ಹಾಗೂ ನನ್ನ ಮಗನಿಗೆ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.





































 
 

ಪ್ರಹ್ಲಾದ ಜೋಶಿ ನಿರಾಕರಣೆ

ನನಗೆ ಯಾರೂ ಸಹೋದರಿ ಇಲ್ಲ. ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ಪಷ್ಟನೆ ನೀಡಿದ್ದಾರೆ. ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಮೊದಲನೆಯದಾಗಿ ನನಗೆ ಯಾರೂ ಸಹೋದರಿ ಇಲ್ಲ. ಇನ್ನು, ನನ್ನ ತಾಯಿಗೆ ಗೋಪಾಲ್ ಜೋಶಿ ಸೇರಿ ನಾಲ್ವರು ಮಕ್ಕಳು. ಆದರೆ ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ನನ್ನ ಸಂಪರ್ಕ, ಸಂಬಂಧವಿಲ್ಲ. ಗೋಪಾಲ್ ಜೋಶಿ ಮಾತ್ರವಲ್ಲ, ಯಾರೇ ತಮ್ಮ ಕೆಲಸ ಕಾರ್ಯಗಳಿಗೆ ನನ್ನ ಹೆಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾಯಾಲದ ಅಫಿಡವಿತ್‌ನಲ್ಲಿ ಅದರ ವಿವರವಿದೆ. ಬೆಂಗಳೂರಿನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ನನ್ನ ಸಹೋದರಿ ಎಂದು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ ನನಗೆ ಸಹೋದರಿಯೇ ಇಲ್ಲ. ಇದನ್ನೆಲ್ಲ, ನೋಡಿದರೆ ಎಲ್ಲ ಬೋಗಸ್ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ, ಗೋಪಾಲ್ ಜೋಶಿ ತಪ್ಪೆಸಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top