ಪುತ್ತೂರು: ಮುಡಾ, ವಾಲ್ಮೀಕಿ ಸೇರಿದಂತೆ ಹಲವಾರು ಹಗರಣದ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತ ನಡೆಸಲಾಗದೆ ಆಕ್ಸಿಜನ್ ಒಳಗೆ ಸೇರಿಕೊಂಡಿದೆ ಎಂದು ದ.ಕ.ಜಿಲ್ಲಾ ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.
ಶನಿವಾರ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಭ್ರಷ್ಟಾಚಾರದಲ್ಲೇ ನಿರತರಾಗಿದ್ದಾರೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಜತೆಗೆ ಗಲಭೆಗಳನ್ನು ನಡೆಸುತ್ತಾ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ರಾಜೀನಾಮೆ ನೀಡುವುದು ಈ ರಾಜ್ಯದ ಪರಂಪರೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಾನೇ ಮಾಡಿದ್ದೇ ಸರಿ ಎಂಬ ದಾರಿಯಲ್ಲಿ ನಡೆಯುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಇಲ್ಲ, ಕಾರ್ಯಗಳು ಕುಂಠಿತಗೊಂಡಿವೆ ಎಂದು ಆರೋಪಿಸಿದ ಅವರು, ಈ ಹಿಂದೆ ಬಿಜೆಪಿ ಸರಕಾರವನ್ನು 40 ಶೇ. ಸರಕಾರದ ಎನ್ನುತ್ತಿದ್ದ ಕಾಂಗ್ರೆಸ್ ಅವರ ಆಡಳಿತ ಈ ಅವಧಿಯಲ್ಲಿ 80 ಶೇ. ಸರಕಾರವಾಗುವ ಮೂಲಕ ಲೂಟಿಕೋರರ, ದಗಾಕೋರರ ಸರಕಾರವಾಗಿ ಮಾರ್ಪಾಡಾಗಿದೆ ಎಂದು ಲೇವಡಿ ಮಾಡಿದರು.
ರಾಷ್ಟ್ರವಿರೋಧಿ ಘೋಷಣೆ, ಪಾಕಿಸ್ತಾನಕ್ಕೆ ಘೋಷಣೆ ನಡೆಯುತ್ತಿರುವ ಸರಕಾರ ಈ ಕುರಿತು ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಒಟ್ಟಾರೆಯಾಗಿ ರಾಷ್ಟ್ರದ್ರೋಹಿಗಳ ಬೆಂಗಾವಲಿನಲ್ಲಿರುವ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಒಂದು ರೀತಿಯ ಆತಂಕ ಸೃಷ್ಟಿ ಮಾಡಿದೆ ಎಂದು ಆರೋಪಿಸಿದರು.
ಈಗಾಗಲೇ ದ.ಕ., ಉಡುಪಿ ಜಿಲ್ಲೆ ಹಲವು ಕಡೆಗಳಿಗೆ ನಾನು ಪ್ರವಾಸ ಕೈಗೊಂಡಿದ್ದು, ಹಿಂದೆ ನಾಲ್ಕು ಅವಧಿಯಲ್ಲಿ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದ ಕೋಟಾ ಶ್ರೀನಿವಾಸ ಪೂಜಾರಿ ಅವರ ಅಭಿವೃದ್ಧಿ ಕೆಲಸಗಳ ಬಗ್ಗೆ ಕೇಳಿ ಬರುತ್ತಿದ್ದು, ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಯುವ ಸಮರ್ಥ ನಾಯಕ ಕಿಶೋರ್ ಪುತ್ತೂರು ಅವರನ್ನು ಆಯ್ಕೆ ಮಾಡಲಾಗಿದೆ. ಕೋಟಾರಂತೆ ಅಭ್ಯರ್ಥಿ ಕಿಶೋರ್ ಕೂಡಾ ಅಧ್ಯಯನಶೀಲ, ಸಮರ್ಥ ನಾಯಕ. ಈ ನಿಟ್ಟಿನಲ್ಲಿ ಅತ್ಯಧಿಕ ಮತಗಳಿಂದ ಅವರು ವಿಧಾನ ಪರಿಷತ್ ಪ್ರವೇಶಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಮಾರ್ತ, ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಪೂಜಾರಿ ಉಜಿರೆಮಾರು, ನಿತೀಶ್ ಕುಮಾರ್ ಶಾಂತಿವನ, ದೇವದಾಸ್, ಪ್ರೇಮಾನಂದ ಶೆಟ್ಟಿ, ಸಂತೋಷ್ ಕೈಕಾರ, ನಗರಸಭೆ ಅಧ್ಯಕ್ಷೆ ಲೀಲಾವತಿ ಉಪಸ್ಥಿತರಿದ್ದರು.