ನವೆಂಬರ್ 1ರಿಂದಲೇ ಹೊಸ ನಿಯಮ ಜಾರಿ
ಹೊಸದಿಲ್ಲಿ : ರೈಲ್ವೆ ಇಲಾಖೆ ಟಿಕೆಟ್ ಮುಂಗಡ ಕಾದಿರಿಸುವ ಅವಧಿಯನ್ನು 4 ತಿಂಗಳಿಂದ 2 ತಿಂಗಳಿಗೆ ಇಳಿಸಿದೆ. ಅಂದರೆ ಇನ್ನು ಮುಂದೆ 4 ತಿಂಗಳು ಮುಂಚಿತವಾಗಿಯೇ ಟ್ರೈನ್ ಟಿಕೆಟ್ ಬುಕ್ ಮಾಡಿಡಲು ಸಾಧ್ಯವಿಲ್ಲ. ಈ ಬದಲಾವಣೆ ನ.1ರಿಂದಲೇ ಜಾರಿಯಾಗಲಿದೆ. ಆದರೆ ಅಕ್ಟೋಬರ್ 31ರ ಮೊದಲು 120 ದಿನಗಳ ಬುಕ್ಕಿಂಗ್ ಮಾನ್ಯವಾಗಿರುತ್ತದೆ ಎಂದು ರೈಲ್ವೇ ಸ್ಪಷ್ಟಪಡಿಸಿದೆ.
ಪರಿಷ್ಕೃತ ಬದಲಾವಣೆಗಳು ವಿಭಿನ್ನ ಮುಂಗಡ ಕಾಯ್ದಿರಿಸುವಿಕೆಯ ಮಿತಿಗಳನ್ನು ಹೊಂದಿರುವ ತಾಜ್ ಎಕ್ಸ್‌ಪ್ರೆಸ್ ಮತ್ತು ಗೋಮತಿ ಎಕ್ಸ್‌ಪ್ರೆಸ್‌ನಂತಹ ಕೆಲವು ಹಗಲಿನ ಎಕ್ಸ್‌ಪ್ರೆಸ್ ರೈಲುಗಳಿಗೆ ಅನ್ವಯಿಸುವುದಿಲ್ಲ. ವಿದೇಶಿ ಪ್ರವಾಸಿಗರಿಗೆ ಇರುವ 365 ದಿನಗಳ ಮುಂಗಡ ಬುಕ್ಕಿಂಗ್ ಆಯ್ಕೆ ಹಾಗೆಯೇ ಮುಂದುವರಿಯಲಿದೆ. ಯಾವ ಕಾರಣಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಅವಧಿಯನ್ನು ಕಡಿತ ಮಾಡಿದೆ ಎನ್ನುವುದನ್ನು ಮಾತ್ರ ರೈಲ್ವೆ ಇಲಾಖೆ ತಿಳಿಸಿಲ್ಲ.
ಮೊದಲು 60 ದಿನಗಳ ಮುಂಚಿತವಾಗಿ ಟಿಕೆಟ್ ಕಾದಿರಿಸುವ ನಿಯಮವೇ ಇತ್ತು. ಬಳಿಕ ಅದನ್ನು 120 ದಿನಗಳಿಗೆ ಏರಿಸಲಾಗಿತ್ತು. ಈಗ ಏಕಾಏಕಿ ಹಿಂದಿನ ನಿಯಮಕ್ಕೆ ಮರಳಲಾಗಿದೆ.
ರೈಲ್ವೆಯ ಅಧಿಕೃತ ಟಿಕೆಟ್ ಬುಕಿಂಗ್ ಸಂಸ್ಥೆ ಐಆರ್‌ಸಿಟಿಸಿ ಜೊತೆಗೆ, ಮೇಕ್‌ಮೈಟ್ರಿಪ್, ಪೇಟಿಎಂ ಮತ್ತು ರೈಲ್ ಯಾತ್ರಿ ಮುಂತಾದ ಥರ್ಡ್-ಪಾರ್ಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲು ಟಿಕೆಟ್‌ಗಳನ್ನು ಕಾದಿರಿಸುವ ಅವಕಾಶವಿದೆ.