ಸುಳ್ಯ: ಸ್ಥಳೀಯ ಪ್ರಾಧಿಕಾರದ ವಿಧಾನ ಪರಿಷತ್ ಉಪ ಚುನಾವಣೆಯ ಸುಳ್ಯ ಮಂಡಲ ಚುನಾವಣಾ ಪ್ರಚಾರ ಸಭೆ ಪೆರುವಾಜೆ ಜೆ.ಡಿ ಆಡಿಟೋರಿಯಂ ನಲ್ಲಿ ನಡೆಯಿತು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಮಾತನಾಡಿ, ಅತಿಯಾದ ಆತ್ಮ ವಿಶ್ವಾಸದಲ್ಲಿ ಮೈಮರೆಯುವುದು ಬೇಡ ಚುನಾವಣೆಯ ವರೆಗೂ ಅವಿರತವಾಗಿ ಶ್ರಮಿಸಿ ಕಿಶೋರ್ ಕುಮಾರ್ ಅವರ ಗೆಲುವು ಖಚಿತಪಡಿಸುವ ಹೊಣೆಗಾರಿಕೆ ನಿಮ್ಮೆಲ್ಲರ ಮೇಲಿದೆ. ಇನ್ನು ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಎಲ್ಲಾ ಮತದಾರರನ್ನೂ ಸಂಪರ್ಕಿಸಬೇಕು ಎಂದು ಹೇಳಿದರು.
ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆ ಗ್ರಾಮದ ಜನರ ನಾಡಿಯನ್ನು ಅರಿಯುವ ಸಾಧನವಾಗಿದ್ದು ಅದನ್ನು ಸಮರ್ಥವಾಗಿ ನಿಭಾಯಿಸುವ ಅಭ್ಯರ್ಥಿ ಬಿಜೆಪಿಯ ಕಿಶೋರ್ ಕುಮಾರ್ ಎಂಬುದು ಎಲ್ಲರಿಗೂ ತಿಳಿದ ವಿಚಾರ. ವಿಧಾನ ಪರಿಷತ್ತಿನಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡಲು ಅವರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಅವರು ಹೇಳಿದರು.
ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಕಾರ್ಯಕರ್ತರ ಪಕ್ಷದಿಂದ ಕಾರ್ಯಕರ್ತರೊಬ್ಬರನ್ನು ಇಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಕಣಕ್ಕಿಳಿಸಲಾಗಿದೆ. ಅವರನ್ನು ಆಯ್ಕೆ ಮಾಡಿ ಕಳಿಸಿಕೊಡುವ ಹೊಣೆಗಾರಿಕೆ ನಮ್ಮೆಲ್ಲಾ ಸದಸ್ಯರ ಮೇಲಿದೆ. ಕಳೆದ ಅನೇಕ ವರ್ಷಗಳಿಂದ ಪಕ್ಷದ ಅನನ್ಯ ಜವಬ್ದಾರಿಗಳನ್ನು ಹೊತ್ತು ಯಶಸ್ವಿಯಾಗಿರುವ ಕಿಶೋರ್ ಕುಮಾರ್ ಅವರಿಗೆ ಪರಿಷತ್ ಸದಸ್ಯರಾಗಿ ಜನಸೇವೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಕರೆ ನೀಡಿದರು.
ಸಭೆಯಲ್ಲಿ, ಮಾಜಿ ಸಚಿವ ಎಸ್.ಅಂಗಾರ, ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ರಾಜ್ಯ ಸಮಿತಿ ಸದಸ್ಯ ತೀರ್ಥರಾಮ್, ಜೆಡಿಎಸ್ ಮುಖಂಡರಾದ ದಯಕಾರ್ ಆಳ್ವ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.