ಸವಣೂರು ಸೀತಾರಾಮ ರೈಯವರಿಗೆ RUPSA ರಾಜ್ಯ ಪ್ರಶಸ್ತಿ | ಅ.21 ರಂದು ಬೆಂಗಳೂರಿನ ಜುಬ್ಲಿ ಅಂತರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ

ಸವಣೂರು: ಕರ್ನಾಟಕ ರಾಜ್ಯ ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳ ಸಂಘ (Recognised Unaided Private Schools’ Association of Karnataka) ಪ್ರದಾನ ಮಾಡುವ ರಾಜ್ಯಮಟ್ಟದ ಉತ್ತಮ ಶಾಲಾ ಆಡಳಿತಗಾರ ಪ್ರಶಸ್ತಿಯು ಸವಣೂರಿನ ಶಿಲ್ಪಿ, ಸಹಕಾರ ರತ್ನ ಸವಣೂರು ಸೀತಾರಾಮ ರೈಯವರಿಗೆ ಒಲಿದು ಬಂದಿದೆ.

ಅಕ್ಟೋಬರ್ 21ರಂದು ಬೆಂಗಳೂರಿನ ಜುಬ್ಲಿ ಅಂತರರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಇತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸವಣೂರು ಸೀತಾರಾಮ ರೈ ಅವರು ಸವಣೂರಿನಲ್ಲಿ 2001 ರಲ್ಲಿ ವಿದ್ಯಾರಶ್ಮಿ ವಿದ್ಯಾಲಯ ಸ್ಥಾಪನೆ ಮಾಡಿದ್ದು, ಆರಂಭದ ಹಂತದಲ್ಲಿ ಎಲ್‍ ಕೆಜಿಯಿಂದ ಪಿಯುಸಿ ತನಕ ಶಿಕ್ಷಣ ಆರಂಭಿಸಿದರು. 2012 ರಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಸ್ಥಾಪನೆ ಮಾಡಿದ್ದಾರೆ. ಸವಣೂರಿನ ಗ್ರಾಮೀಣ ಪ್ರದೇಶದಲ್ಲಿ ಸುಮಾರು 27 ಎಕ್ರೆ ಜಾಗದಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ಬಳಿಕ ಡಿಎಡ್‍ ಹಾಗೂ ನರ್ಸಿಂಗ್‍ ಕೋರ್ಸ್‍ ಆರಂಭಿಸಿದ್ದರು. ಪ್ರಸ್ತುತ ಈ ಕೋರ್ಸ್‍ ಗಳು ನಿಂತಿವೆ. ಪ್ರಸ್ತುತ ಕೆ.ಜಿ., ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಮಟ್ಟದ ಶಿಕ್ಷಣಗಳನ್ನು ನೀಡುತ್ತಿದ್ದಾರೆ. ಸುಮಾರು 850 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸುಮಾರು 65 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. 220 ಹುಡುಗರು ಮತ್ತು 180 ಹುಡುಗಿಯರು, ಒಟ್ಟು 400 ಮಕ್ಕಳಿಗೆ ಆಗುವಷ್ಟು ವಸತಿ ನಿಲಯದ ವ್ಯವಸ್ಥೆ ಇದೆ.































 
 

SSLC, PUC & Degree ಪರೀಕ್ಷೆಗಳಲ್ಲಿ 100% ಫಲಿತಾಂಶ ಸಹಿತವಾಗಿ ನಿರಂತರ ಉತ್ತಮ ಫಲಿತಾಂಶ ಬರುತ್ತಿದೆ. SSLCಯಲ್ಲಿ ರಾಜ್ಯ ಮಟ್ಟದ 5ನೆ Rank ಬಂದಿದೆ.

ಶಾಲಾ ಆವರಣದಲ್ಲಿ ವೈಟ್ ಲಿಫ್ಟಿಂಗ್, ಮಲ್ಟಿ ಜಿಮ್, 200 mtrs.ನ track ಉಳ್ಳ ಎರಡು ಮೈದಾನಗಳು, ಇತರ ಕ್ರೀಡೆಗೆ ಬೇಕಾದ ಸಮಗ್ರ ವ್ಯವಸ್ಥೆಗಳು ಇವೆ. ಪಾರಂಪರಿಕ ವಸ್ತುಗಳ ಸಂಗ್ರಹಾಲಯ ಇದೆ. * Atal Tinkering Laboratory, Robotics Laboratory ವ್ಯವಸ್ಥೆ ಮಾಡಲಾಗಿದೆ.

ಇತರ ಶಿಕ್ಷಣ ಸಂಸ್ಥೆಗಳಿಗೆ ಸಹಕಾರ, ಪ್ರೋತ್ಸಾಹ :

ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸರಕಾರದಿಂದ 6.20 ಎಕರೆ ಮತ್ತು ಸರಕಾರಿ ಪ್ರಾಥಮಿಕ ಶಾಲೆಗೆ 3.10 ಎಕರೆ ಭೂಮಿ ಮಾಡಿಸಿಕೊಟ್ಟಿದ್ದಾರೆ. ಅಲ್ಲದೆ  ಸರಕಾರಿ ಪ್ರಾಥಮಿಕ ಶಾಲೆಗೆ ಶಾರದಾ ಸಭಾ ಭವನ ನಿರ್ಮಿಸಿ ಕೊಟ್ಟಿದ್ದಾರೆ.

ಸುತ್ತಲಿನ ಸವಣೂರು, ಕುದ್ಮಾರು, ಆಲಂಕಾರು, ಸರ್ವೆ , ತಿಂಗಳಾಡಿ, ಕೆದಂಬಾಡಿ, ಮುಕ್ಕೂರು, ಪೆರುವಾಜೆ, ಬೆಳ್ಳಾರೆ, ಕಾಣಿಯೂರು ಮುಂತಾದ ಸ್ಥಳಗಳಲ್ಲಿ ಶಾಲೆಗಳಿಗೆ ವಿದ್ಯುದೀಕರಣ, ಕುಡಿಯುವ ನೀರಿನ ವ್ಯವಸ್ಥೆ, ಪೀಠೋಪಕರಣ, ಆವರಣ ಗೋಡೆ, ತರಗತಿ ಕೊಠಡಿ, ವೇದಿಕೆ, ಉದ್ಯಾನವನ ಮುಂತಾದವುಗಳನ್ನು ನೀಡಿದ್ದಾರೆ. ಜತೆಗೆ ಆಸುಪಾಸಿನ ಸುಮಾರು 5 ದೇವಾಲಯಗಳ ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶಗಳನ್ನು ಸುಸೂತ್ರವಾಗಿ ನೆರವೇರಿಸಿಕೊಟ್ಟಿದ್ದಾರೆ. ಸವಣೂರಿನ ಗ್ರಾಮ ಪಂಚಾಯತ್, ಯುವಕ, ಯುವತಿ ಮಂಡಲಗಳು, ಮಹಿಳಾ ಹಾಲುತ್ಪಾದಕರ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಉತ್ತೇಜನ ನೀಡಿದ್ದಾರೆ.  ಸ್ವಂತವಾಗಿ 8 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ ಶೌಚಾಲಯದ ಕೊಡುಗೆಯಂತಹ ನೂರಾರು ಕೊಡುಗೆಗಳನ್ನು ಉದಾರವಾಗಿ ನೀಡಿದ್ದಾರೆ.

ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಎಂಬ ಸ್ವಂತ ಸಹಕಾರಿ ಸಂಘವನ್ನು ನಡೆಸುತ್ತಾ ಸುಮಾರು 65 ಜನರಿಗೆ ಉದ್ಯೋಗ ನೀಡಿದ್ದಾರೆ. ಅದರ ಮೂಲಕ ಪ್ರತಿ ವರುಷವೂ ಸುಮಾರು ಮೂರು ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ಸರಕಾರಿ ಶಾಲಾ ಮಕ್ಕಳಿಗೆ ನೀಡುತ್ತಾ ಬರುತ್ತಿದ್ದಾರೆ. ಸಾಹಿತ್ಯ ಸಮ್ಮೇಳನ, ಕೃಷಿ ಸಮ್ಮೇಳಗಳಂತಹ ಅನೇಕ ಸಾರ್ವಜನಿಕ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿ ನಿರ್ವಹಿಸಿಕೊಡುವ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿ ಪ್ರತಿ ವರ್ಷವೂ ಎಲ್ಲಾ ರೋಟರಿ, ಲಯನ್ಸ್ ಮತ್ತು ಸಾರ್ವಜನಿಕ ಬಂಧುಗಳನ್ನು ಪ್ರತಿ ವರ್ಷವೂ ಆಹ್ವಾನಿಸಿ ‘ಸ್ನೇಹ ರಶ್ಮಿ’ ಎಂಬ ಸ್ನೇಹ ಕೂಟವನ್ನು ಆಯೋಜಿಸುತ್ತಿದ್ದಾರೆ. ಕರ್ನಾಟಕ ರಾಜ್ಯಮಟ್ಟದ ಸಹಕಾರಿ ರತ್ನ ಪ್ರಶಸ್ತಿಯನ್ನು ಪಡೆದಿರುವುದಲ್ಲದೆ ಇತರ ಅನೇಕ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಶೀಂಟೂರು ನಾರಾಯಣ ರೈ ಹಾಗೂ ಯಮುನಾ ರೈ ದಂಪತಿ ಪುತ್ರನಾಗಿ ಜೂನ್ 9, 1948 ರಲ್ಲಿ ಜನಿಸಿದ ಸವಣೂರು ಸೀತಾರಾಮ ರೈ ಅವರು, ಹತ್ತನೇ ತರಗತಿ ಓದಿದ್ದು, ಓರ್ವ ಪುತ್ರ ಮಹೇಶ್‍ ಎಸ್‍ ರೈ ಅಮೇರಿಕಾದಲ್ಲಿ ಇಂಜಿನಿಯರ್ ಆಗಿದ್ದಾರೆ. ಇನ್ನೋರ್ವ ಪುತ್ರ ಮಹೇಶ್‍ ಎಸ್‍. ರೈ, ಇಂಗ್ಲೇಂಡ್‍ ನಲ್ಲಿ ವೈದ್ಯರಾಗಿದ್ದಾರೆ. ಪ್ರಸ್ತುತ ಪತ್ನಿ ಕಸ್ತೂರಿಕಲಾ ಎಸ್‍.ರೈ, ಮಗಳು ರಶ್ಮಿ ಎ. ಶೆಟ್ಟಿ ಹಾಗೂ ಅಳಿಯ ಅಶ್ವಿನ್‍ ಎಲ್‍. ಶೆಟ್ಟಿ, ಮೊಮ್ಮಕ್ಕಳಾದ ಅಥರ್ವ ಎ. ಶೆಟ್ಟಿ ಹಾಗೂ ಅವಿ ಎ. ಶೆಟ್ಟಿ ಅವರೊಂದಿಗೆ ಸವಣೂರಿನಲ್ಲಿ ವಾಸಿಸುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top