ಪುತ್ತೂರು: ಭಾರತ ದೇಶದ ಸಾಂಸ್ಕೃತಿಕ ಪರಂಪರೆ ಹೊಂದಿರುವ ವಿವಿಧ ಪ್ರಾಕಾರದ ಕಲೆಗಳು ಸವಕಲು ನಾಣ್ಯವಾಗದೆ ಚಲಾವಣೆಯ ನಾಣ್ಯಗಳಾಗಿ ನಿರಂತರ ನಡೆಯುತ್ತಿರಬೇಕು. ಈ ಮೂಲಕ ಕಲೆಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದರು.
ಅವರು ಪುತ್ತೂರು ಮೂಕಾಂಬಿಕ ಕಲ್ಚರಲ್ ಅಕಾಡೆಮಿ ಅರ್ಪಿಸುವ ಯುಗಳ ನೃತ್ಯ- ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ದಂಪತಿಗಳಿಂದ ಪ್ರದರ್ಶನಗೊಂಡ ‘ನೃತ್ಯೋತ್ಕ್ರಮಣ-2024’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಮ್ಮಲ್ಲಿ 8 ಬಗೆಯ ಶಾಸ್ತ್ರೀಯ ನೃತ್ಯಗಳಿದ್ದು, ವೇಷಭೂಷಣ, ಹೆಜ್ಜೆಗೆಜ್ಜೆಗಳಿಂದ ಹಿಮ್ಮೇಳದೊಂದಿಗೆ ಪ್ರಸ್ತುತ ಪಡಿಸುವ ಕಲಾಪ್ರಕಾರಗಳು ಜೀವನೋತ್ಸಾಹ ನೀಡುತ್ತಿದೆ. ಉಪನಿಷತ್ತು, ಪುರಾಣಗಳು ಇವೆಲ್ಲವನ್ನು ಇಟ್ಟುಕೊಂಡು
ನಿರ್ಮಲ ಮನಸ್ಸು ಕಟ್ಟುವ ಕೆಲಸವನ್ನು ಕಲೆಗಳು ಮಾಡುತ್ತಿವೆ ಎಂದ ಅವರು, ಭರತನಾಟ್ಯದಂತಹ ಕಲೆಯನ್ನು ಸರಳ ಸಜ್ಜನಿಕೆ, ತಾಳ್ಮೆ, ಜ್ಞಾನದೊಂದಿಗೆ ಕಲೆಗಾಗಿ ಬದುಕನ್ನು ಮೀಸಲಿಟ್ಟು ವಿದ್ವಾನ್ ದೀಪಕ್ ಕುಮಾರ್ ಅವರು ನೃತ್ಯದ ಮೂಲಕ ಪುತ್ತೂರಿಗೆ ನೀಡಿರುವ ಕೊಡುಗೆ ಅಪಾರ ಎಂದರು.
ಪ್ರಸ್ತುತ ಮಾಧ್ಯಮಗಳ ಭರಾಟೆಯಿಂದ ಸಾಂಸ್ಕೃತಿಕವಾಗಿ ಭ್ರಷ್ಟವಾಗುತ್ತಿದ್ದು, ಮಕ್ಕಳನ್ನು ರಕ್ಷಣೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಶಾಸ್ತ್ರೀಯ, ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಕೆಲಸ ಪೋಷಕರು, ನೃತ್ಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಂದ ಆಗಬೇಕಾಗಿದೆ ಎಂದರು.
ಶಾಂತಲಾ ಪ್ರಶಸ್ತಿ ಪುರಸ್ಕೃತ, ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭರತನಾಟ್ಯವನ್ನು ಶಾಸ್ತ್ರೀಯವಾಗಿ ಉಳಿಸಿಕೊಂಡು, ಅದರಲ್ಲಿ ಪ್ರಯೋಗಗಳನ್ನು ಮಾಡಿಕೊಂಡು ಕಲೆಯನ್ನು ಉಳಿಸಿಕೊಂಡು ವಿದ್ವಾನ್ ದೀಪಕ್ ಕುಮಾರ್ ಮಾಡುತ್ತೀರುವುದು ಅಭಿನಂದನೀಯ. ಅವರಿಂದ ಸನಾತನ ಕಲೆ ನಿರಂತರವಾಗಿ ಮುಂದುವರಿಯಲಿ ಎಂದರು.
ವೇದಿಕೆಯಲ್ಲಿ ಅಕಾಡೆಮಿಯ ನಿರ್ದೇಶಕಿ ಶಶಿಪ್ರಭಾ, ನೃತ್ಯಗುರು ವಿದ್ವಾನ್ ಗಿರೀಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಳ್ಳಾಲ ಮೋಹನ್ ಕುಮಾರ್ ಹಾಗೂ ಡಾ.ಮೋಹನ್ ಆಳ್ವ ಅವರಿಗೆ ಗೌರವಾರ್ಪಣೆ ನಡೆಯಿತು. ಹಿಮ್ಮೇಳ ಕಲಾವಿದರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸೌಜನ್ಯ ಪಡ್ವೆಟ್ನಾಯ ಸ್ವಾಗತಿಸಿ, ವಂದಿಸಿದರು. ತೇಜಸ್ವಿ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯುಗಳ ನೃತ್ಯ- ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ದಂಪತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಕುರಿತ ಪದವರ್ಣದ ಭರತನಾಟ್ಯ ಪ್ರದರ್ಶನಗೊಂಡಿತು.