ಸಲ್ಮಾನ್‌ ಖಾನ್‌ ಹತ್ಯೆಗೆ ಪಾಕಿಸ್ಥಾನದಿಂದ ಎಕೆ 47 ಬಂದೂಕು ಖರೀದಿ

25 ಲ.ರೂ. ಸುಪಾರಿ ನೀಡಿ ಕೊಲೆಗೆ ಪ್ಲಾನ್‌

ಮುಂಬಯಿ: ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರನ್ನು ಮಹಾರಾಷ್ಟ್ರದ ಪನ್ವೇಲ್‌ನಲ್ಲಿರುವ ಅವರ ಫಾರ್ಮ್‌ಹೌಸ್ ಬಳಿ ಹತ್ಯೆ ಮಾಡಲು 25 ಲಕ್ಷ ರೂ. ಸುಪಾರಿ ಪಡೆಯಲಾಗಿತ್ತು ಎಂಬ ಶಾಕಿಂಗ್‌ ವಿಚಾರ ಮುಂಬೈ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಸಲ್ಮಾನ್‌ ಖಾನ್‌ ಹತ್ಯೆ ಯತ್ನ ಪ್ರಕರಣದ ಐವರು ಆರೋಪಿಗಳ ವಿರುದ್ಧ ಮಹಾರಾಷ್ಟ್ರದ ನವಿಮುಂಬಯಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಸಲ್ಮಾನ್‌ ಹತ್ಯೆಗೆ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸುಪಾರಿ ಪಡೆದುಕೊಂಡಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳು ಪಾಕಿಸ್ಥಾನದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಎಕೆ 47, ಎಕೆ 92 ಮತ್ತು ಎಂ16 ಮತ್ತು ಟರ್ಕಿ ನಿರ್ಮಿತ ಜಿಗಾನಾ ಬಂದೂಕುಗಳನ್ನು ಖರೀದಿಸಲು ಸಿದ್ಧತೆ ನಡೆಸಿದ್ದರು. ಆರೋಪಿಗಳು ಸಲ್ಮಾನ್ ಖಾನ್ ಅವರ ಹತ್ಯೆಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರನ್ನು ನೇಮಿಸಿಕೊಂಡಿದ್ದಾರೆ. ಅವರೆಲ್ಲರೂ ಪುಣೆ, ರಾಯಗಡ, ನವಿಮುಂಬಯಿ, ಥಾಣೆ ಮತ್ತು ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಅವರನ್ನು ಕೊಲ್ಲುವ ಯೋಜನೆಯನ್ನು ಆಗಸ್ಟ್ 2023 ಮತ್ತು ಏಪ್ರಿಲ್ 2024ರ ನಡುವೆ ರೂಪಿಸಲಾಗಿತ್ತು. ಸುಮಾರು 60 ರಿಂದ 70 ಜನರು ಬಾಂದ್ರಾ ಮನೆ, ಪನ್ವೇಲ್ ಫಾರ್ಮ್‌ಹೌಸ್ ಮತ್ತು ಗೋರೆಗಾಂವ್ ಫಿಲ್ಮ್‌ಸಿಟಿಯಲ್ಲಿ ಸಲ್ಮಾನ್ ಖಾನ್ ಅವರ ಚಲನವಲನಗಳನ್ನು ಗಮನಿಸುತ್ತಿದ್ದರು.

ಪಾಣಿಪತ್‌ನಿಂದ ಬಂಧಿತನಾಗಿದ್ದ ಶೂಟರ್ ಸುಖಾ ಅಜಯ್ ಕಶ್ಯಪ್ ಅಲಿಯಾಸ್ ಎಕೆ ಮತ್ತು ನಾಲ್ಕು ಮಂದಿ ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ಬಿಗಿ ಭದ್ರತೆ ಮತ್ತು ಬುಲೆಟ್ ಪ್ರೂಫ್ ವಾಹನಗಳು ಇರುವ ಕಾರಣ ಸಲ್ಮಾನ್‌ ಖಾನ್‌ ಅವರ ಕೊಲೆಯನ್ನು ನಡೆಸಲು ಅತ್ಯಾಧುನಿಕ ಆಯುಧಗಳು ಬೇಕಾಗುತ್ತವೆ ಎಂಬ ನಿರ್ಧಾರಕ್ಕೆ ತಂಡ ಬಂದಿತ್ತು. ಸುಖಾ ಪಾಕಿಸ್ತಾನ ಮೂಲದ ಶಸ್ತ್ರಾಸ್ತ್ರ ವ್ಯಾಪಾರಿ ಡೋಗರ್‌ ಜೊತೆ ವೀಡಿಯೊ ಕರೆ ಮೂಲಕ ಸಂಪರ್ಕಿಸಿದ್ದ. AK-47 ಮತ್ತು ಇತರ ಸುಧಾರಿತ ಶಸ್ತ್ರಾಸ್ತ್ರಗಳನ್ನು ಹೊಂದಿಸುವ ಸಲುವಾಗಿ ಮಾತುಕತೆ ನಡೆದಿತ್ತು. ಡೋಗರ್‌ ಶಸ್ತ್ರಾಸ್ತ್ರಗಳನ್ನು ಪೂರೈಸಲು ಒಪ್ಪಿಕೊಂಡಿದ್ದ. ಸುಖಾ 50 ಪ್ರತಿಶತ ಹಣವನ್ನು ಮುಂಗಡ ಪಾವತಿಸುತ್ತೇನೆ ಮತ್ತು ಉಳಿದ ಮೊತ್ತವನ್ನು ಭಾರತದಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದ್ದ.
ಎಲ್ಲ ಶೂಟರ್‌ಗಳು ಕೃತ್ಯ ಎಸಗಲು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್‌ ಅವರ ಅನುಮತಿಗಾಗಿ ಕಾಯುತ್ತಿದ್ದರು. ಸಲ್ಮಾನ್‌ ಖಾನ್‌ ಅವರನ್ನು ಹತ್ಯೆ ನಡೆಸಿದ ಬಳಿಕ ಎಲ್ಲರೂ ಕನ್ಯಾಕುಮಾರಿಯಲ್ಲಿ ಸೇರಬೇಕು. ನಂತರ ಬೋಟ್‌ ಮೂಲಕ ಶ್ರೀಲಂಕಾಗೆ ತೆರಳಿ ಅಲ್ಲಿಂದ ಭಾರತ ಭಾರತೀಯ ತನಿಖಾ ಸಂಸ್ಥೆಗಳು ತಲುಪಲು ಸಾಧ್ಯವಾಗದ ದೇಶಕ್ಕೆ ತೆರಳಲು ಪ್ಲಾನ್‌ ಮಾಡಿದ್ದರು.
ಬಾಂದ್ರಾದಲ್ಲಿರುವ ಸಲ್ಮಾನ್‌ ಖಾನ್‌ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿದ ಪ್ರಕರಣದ ತನಿಖೆ ಇಳಿದಾಗ ಹತ್ಯೆಯ ಸಂಚು ಬಯಲಾಗಿದೆ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top