ಪುತ್ತೂರು: ಸುಮಾರು 5 ಸಾವಿರ ವರ್ಷಗಳ ಇತಿಹಾಸ ಇರುವ, ಜನಸಮುದಾಯಕ್ಕೆ ಭಕ್ತಿ, ಭಾವನೆಗಳನ್ನು ನೀಡಿರುವ ರಾಮಾಯಣವನ್ನು ದೇಶಕ್ಕೆ ಸಮರ್ಪಣೆ ಮಾಡಿರುವ ಮಹಾನ್ ವ್ಯಕ್ತಿ ವಾಲ್ಮೀಕಿ ಮಹರ್ಷಿಗಳ ಜಯಂತಿ ಆಚರಣೆ ಪ್ರಸ್ತುತ ಅರ್ಥಪೂರ್ಣ ಎಂದು ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.
ಅವರು ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಡಳಿತ ಸೌಧದಲ್ಲಿ ನಡೆದ ವಾಲ್ಮೀಕಿ ಮಹರ್ಷಿ ಜಯಂತಿ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೊಡಿ-ಬಡಿ ವ್ಯವಸ್ಥೆಯ ಮೂಲಕ ಜನರನ್ನು ದೋಚುವ, ಬೇಡ ಜನಾಂಗದಲ್ಲಿ ಹುಟ್ಟಿದ ವಾಲ್ಮೀಕಿ ಮಹರ್ಷಿಯವರು ಮನಃ ಪರಿವರ್ತನೆ ಮೂಲಕ ತಪ್ಪಸ್ಸನ್ನಾಚರಿಸಿ ಭಾರತದ ಪವಿತ್ರ ಗ್ರಂಥ ರಾಮಾಯಣದ ಮೂಲಕ ತತ್ವಜ್ಞಾನ, ಜನಜೀವನ ಯಾವ ರೀತಿ ಜೀವನ ರೂಢಿಸಿಕೊಳ್ಳಬೇಕು ಮುಂತಾದ ಅಮೂಲ್ಯ ವಿಚಾರಗಳನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿ ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಜಯಂತಿ ಆಚರಣೆ ನಡೆಸಲಾಗುತ್ತಿದೆ ಎಂದರು.
ಪ್ರಸ್ತುತ ಕರ್ನಾಟಕದಲ್ಲಿ 60 ಲಕ್ಷ ಮಂದಿ ವಾಲ್ಮೀಕಿ ಮಹರ್ಷಿಯವರ ಜಾತಿಗೆ ಸೇರಿದವರಿದ್ದಾರೆ. ಅವರಿಗಾಗಿ ಸರಕಾರ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗ ಪಡೆಯುವಂತೆ ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದರು.
ವೇದಿಕೆಯಲ್ಲಿ ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಸಮುದಾಯದ ರಾಜ್ ಬಪ್ಪಳಿಗೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಮರ್ಷಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹರಿಣಾಕ್ಷಿ ಪ್ರಾರ್ಥನೆ ಹಾಡಿದರು. ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರೇಮಲತಾ ವಂದಿಸಿದರು.