ಅಪ್ಪ ಮಗನಾದ, ಮಗ ಅಪ್ಪನಾದ ಅಪರೂಪದ ಸಿನಿಮಾ ಪಾ

ಅಮಿತಾಬ್ ಬಚ್ಚನ್ ಎಂಬ ಮಹಾನಟನ ಬದ್ಧತೆ-ಪ್ರಯೋಗಶೀಲತೆಗೆ ಸಾಕ್ಷಿಯಾದ ಸಿನೆಮಾ

ಭಾರತೀಯ ಸಿನಿಮಾ ರಂಗದ ಇತಿಹಾಸದಲ್ಲಿಯೇ ಅತ್ಯಂತ ಅಪರೂಪದ ಹಿಂದಿ ಸಿನೆಮಾ ಪಾ. ಅಮಿತಾಬ್ ಬಚ್ಚನ್ ಎಂಬ ಮಹಾನಟನ ಪ್ರಯೋಗಶೀಲತೆ, ಬದ್ಧತೆ ಮತ್ತು ಸೃಜನಶೀಲ ಅಭಿನಯಕ್ಕೆ ಸಾಕ್ಷಿ ಈ ಪಾ ಸಿನಿಮಾ. ಅದು ರೂಪುಗೊಂಡ ಕತೆಯೇ ಆ ಸಿನಿಮಾದ ಕತೆಗಿಂತ ಹೆಚ್ಚು ರೋಚಕವಾಗಿದೆ.

ಪಾ ಸಿನಿಮಾ ರೂಪುಗೊಂಡ ಕತೆಯನ್ನು ಆ ಸಿನಿಮಾದ ನಿರ್ದೇಶಕ ಬಾಲ್ಕಿ ಆರ್ (Bhalki R) ಅವರ ಮಾತುಗಳಲ್ಲಿ ಕೇಳುತ್ತಾ ಮುಂದೆ ಹೋಗೋಣ…



































 
 

ನಿರ್ದೇಶಕ ಆರ್. ಭಾಲ್ಕಿ ಹೇಳಿದ್ದು ಏನು?

ನಾನು 1996ರಲ್ಲಿ ಬಿಡುಗಡೆಯಾದ ಹಾಲಿವುಡ್ ರೋಚಕ ಸಿನಿಮಾ ‘ಜಾಕ್ ‘ ನೋಡಿ ಮೆಚ್ಚಿದ್ದೆ .ಆ ಸಿನಿಮಾ ನನ್ನ ಮಸ್ತಿಷ್ಕದಲ್ಲಿ ಗಟ್ಟಿಯಾಗಿ ಕೂತು ಬಿಟ್ಟಿತ್ತು. ಅದನ್ನು ಹಿಂದಿ ಭಾಷೆಯಲ್ಲಿ ಮರುನಿರ್ಮಾಣ ಮಾಡಬೇಕು ಎಂಬ ತುಡಿತ ಹೆಚ್ಚಾಯಿತು. ಅದಕ್ಕಾಗಿ ಎರಡು ವರ್ಷಗಳ ಕಾಲ ಸಮಯ ತೆಗೆದುಕೊಂಡು ಕತೆ ಮತ್ತು ಚಿತ್ರಕತೆ ಬರೆದು ಮುಗಿಸಿದ್ದೆ.

ಅದರ ಕತೆಯನ್ನು ಚುಟುಕಾಗಿ ನಿಮಗೆ ನಾನು ಹೇಳಬೇಕು. ಅದರಲ್ಲಿ ಔರೋ ಎಂಬ ಬುದ್ಧಿವಂತ ಹುಡುಗನ ಪಾತ್ರ ಬರುತ್ತದೆ. ಆತನಿಗೆ ಹದಿಮೂರು ವರ್ಷದ ಪ್ರಾಯದಲ್ಲಿ ‘ಪ್ರೋಜೇರಿಯಾ ‘ಎಂಬ ವಿಚಿತ್ರವಾದ ಕಾಯಿಲೆ ಬಂದಿರುತ್ತದೆ. ಅದು ಬಾಲ್ಯದಲ್ಲಿಯೇ ವೃದ್ಧಾಪ್ಯ ಅಮರುವ ವಿಚಿತ್ರವಾದ ಕಾಯಿಲೆ. ಹತ್ತು ಲಕ್ಷ ಮಂದಿಯಲ್ಲಿ ಒಬ್ಬರಿಗೆ ಮಾತ್ರ ಬರುವ ಕಾಯಿಲೆ ಅದು. ಒಂದು ಕಡೆ ಮುದಿತನದ ಸಮಸ್ಯೆ ಆದರೆ ಮತ್ತೊಂದೆಡೆ ದೊಡ್ಡ ತಲೆ, ಸಣ್ಣ ಕೈ ಕಾಲು, ಉಬ್ಬಿದ ದವಡೆ, ಕೀರಲು ಸ್ವರ… ಹೀಗೆಲ್ಲ ವಿಚಿತ್ರವಾದ ದೈಹಿಕ ಸಮಸ್ಯೆಗಳು.

ಬಾಲ್ಯದಿಂದ ಅಪ್ಪನ ಮುಖ ನೋಡದ ಔರೋ ತನ್ನ ಅಮ್ಮ (ವಿದ್ಯಾ ಬಾಲನ್)ನನ್ನು ನನ್ನ ಅಪ್ಪ ಯಾರು? ಎಂದು ದಿನವೂ ಕೇಳುತ್ತಾನೆ. ಅಮ್ಮ ಏನೇನೋ ಕಾರಣ ಹೇಳಿ ಗೋಡೆಯ ಮೇಲೆ ದೀಪ ಇಡುತ್ತಾಳೆ. ಅಜ್ಜಿಗೆ (ಅರುಂಧತಿ ನಾಗ್) ತನ್ನ ಮಗಳನ್ನು ಒಬ್ಬಂಟಿಯಾಗಿ ಬಿಟ್ಟುಹೋದ ಅಳಿಯನ ಮೇಲೆ ಸಿಟ್ಟು.

ಅಪ್ಪ ಮಗನ ಭಾವನಾತ್ಮಕ ಸಂಬಂಧದ ಕಥೆ

ಮುಂದೆ ಔರೋ ಕಲಿಯುತ್ತಿರುವ ಶಾಲೆಗೆ ಅವನ ಅಪ್ಪ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಬರುತ್ತಾನೆ. ಅಲ್ಲಿ ತನ್ನ ಪ್ರತಿಭೆಯ ಮೂಲಕ ಬಹುಮಾನ ಗೆದ್ದ ಔರೋ ಮತ್ತು ಅಪ್ಪನ ಗೆಳೆತನ ಬೆಳೆಯುತ್ತದೆ. ಮುಂದೇನಾಗುತ್ತದೆ ಎಂದು ಸಿನಿಮಾ ನೋಡಿ ನೀವು ಹೇಳಬೇಕು.

ನಾನು ಚಿತ್ರಕತೆಯನ್ನು ಬರೆಯುವಾಗ ಅಪ್ಪನ ಪಾತ್ರವನ್ನು ಅಮಿತಾಬ್ ಮಾಡಬೇಕು, ಮಗ ಔರೋ ಪಾತ್ರ ಅವರ ಮಗ ಅಭಿಷೇಕ್ ಬಚ್ಚನ್ ಮಾಡಲಿ ಎಂದು ಮನಸಲ್ಲಿ ಇಟ್ಟುಕೊಂಡು ಬರೆದಿದ್ದೆ. ಒಂದು ಫೈನ್ ಡೇ ನಾನು ಅವರ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದೆ.

ಅಮಿತಾಬ್ ಮನೆಯಲ್ಲಿ ಭಾಲ್ಕಿ

ಅಂದು ಅಪ್ಪ, ಮಗ ಇಬ್ಬರೂ ಮನೆಯಲ್ಲಿಯೇ ಇದ್ದರು. ಇಬ್ಬರನ್ನೂ ಕೂರಿಸಿ ಇಡೀ ಸಿನಿಮಾದ ಕಥೆಯನ್ನು ಹೇಳಿದೆ. ಇಬ್ಬರೂ ಕೇಳಿದರು. ಅಪ್ಪನ ಪಾತ್ರ ಅಮಿತಾಬ್ ಮಾಡಲಿ ಎಂದೆ. ಮಗ ಅಭಿಷೇಕ್ ಕೂಡ ಪ್ರತಿಭಾವಂತ, ಆತನು ಔರೋ ಪಾತ್ರ ಮಾಡಲಿ ಎಂದೆ.

ಆಗ ಅಭಿಷೇಕ್ ಕಣ್ಣಲ್ಲಿ ಒಂದಷ್ಟು ಗೊಂದಲದ ಗೆರೆ ನನಗೆ ಕಂಡಿತು. ಆತನು ಒಂದೆರಡು ಪ್ರಶ್ನೆ ಕೇಳಿ ಅಪ್ಪನ ಮುಖ ನೋಡುತ್ತಾ ಕೂತುಬಿಟ್ಟ. ಆತನ ಮನಸಿನ ಭಾವನೆ ಅಮಿತಾಬ್‌ಗೆ ಅರ್ಥ ಆಯ್ತು ಅಂತ ನನಗೆ ಅನ್ನಿಸಿತು.

ಅಮಿತಾಬ್ ತನ್ನ ಮಗನನ್ನು ಒಂದು ಕ್ಷಣ ಮನೆಯ ಒಳಗೆ ಕರೆದುಕೊಂಡು ಹೋಗಿ ಹಿಂದೆ ಬಂದನು. ಅವರಿಬ್ಬರೂ ಮಾತಾಡಿ ಒಂದು ನಿರ್ಧಾರಕ್ಕೆ ಬಂದ ಹಾಗೆ ನನಗೆ ಅನ್ನಿಸಿತು.
ಬಂದವರೇ ಅಮಿತಾಬ್ ʼಬಾಲ್ಕೀ, ನಿಮಗೆ ಅಭ್ಯಂತರ ಇಲ್ಲಾಂದ್ರೆ ನಾನು ಔರೋ ಪಾತ್ರ ಮಾಡ್ತೇನೆ. ಅಭಿಷೇಕ್ ಅಪ್ಪನ ಪಾತ್ರ ಮಾಡಲಿʼ ಎಂದರು. ನಾನು ನಿಜವಾಗಿಯೂ ಬೆಚ್ಚಿ ಬಿದ್ದೆ. ಯಾಕೆಂದ್ರೆ ಅಂತಹ ಪ್ರಯೋಗ ಭಾರತೀಯ ಸಿನಿಮಾ ರಂಗದಲ್ಲಿ ಎಂದಿಗೂ ಆಗಿರಲಿಲ್ಲ.

ಅಪ್ಪನ ಪಾತ್ರ ಮಗ, ಮಗನ ಪಾತ್ರ ಅಪ್ಪ…

ಆಗ ಅಮಿತಾಬ್ ಬಚ್ಚನ್ ಅವರ ವಯಸ್ಸು 67. ಅಂತಹ ಪ್ರಾಯದಲ್ಲಿ 13 ವರ್ಷದ ಹುಡುಗನ ಪಾತ್ರ ಮಾಡುವುದು ಅಂದರೆ? ಅದು ಕೂಡ ಪ್ರೋಜೇರಿಯ ಪೀಡಿತ ಹುಡುಗನ ಪಾತ್ರ. ಅಲ್ಲದೆ ಅಪ್ಪ ಮಗನ ಪಾತ್ರ ಮಾಡುವುದು, ಮಗ ಅಪ್ಪನ ಪಾತ್ರ ಮಾಡುವುದು…. ಇದು ಹಿಂದೆ ಎಂದೂ ಆಗಿರಲಿಲ್ಲ.

ನನ್ನ ಮೌನ ಅಮಿತಾಬ್ ಅವರಿಗೆ ಅರ್ಥ ಆಯಿತು. ಅವರು ʼಬಾಲ್ಕೀ, ನೀವೇನೂ ಆತಂಕ ಮಾಡಬೇಡಿ. ಎಲ್ಲವನ್ನೂ ನಾನು ಮ್ಯಾನೇಜ್ ಮಾಡುತ್ತೇನೆ. ನನಗೆ ಪಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲು ಮೂರು ತಿಂಗಳ ಸಮಯ ಬೇಕು. ನೀವು ಶೂಟಿಂಗ್ ರೆಡಿ ಮಾಡಿ. ನಾವಿಬ್ಬರೂ ಬರುತ್ತೇವೆʼ ಎಂದು ಕೈಮುಗಿದು ಕಳುಹಿಸಿದರು.

ನಾನಿನ್ನೂ ಶಾಕ್‌ನಿಂದ ಹೊರ ಬಂದಿರಲಿಲ್ಲ. ಮನೆಗೆ ಬಂದು ಮತ್ತೆ ಮೂರು ತಿಂಗಳು ತೆಗೆದುಕೊಂಡು ಚಿತ್ರಕಥೆಯನ್ನು ಹಲವು ಬಾರಿ ಟ್ರಿಮ್ ಮಾಡಿದೆ. ಅಮಿತಾಬ್ ಮಾಡುವ ಔರೋ ಪಾತ್ರವು ನನಗೆ ಹಗಲು ರಾತ್ರಿ ಕಣ್ಣ ಮುಂದೆ ಬರಲು ಆಗಲೇ ಆರಂಭ ಆಗಿತ್ತು.

ಅಮಿತಾಬ್ ಆ ಮೂರು ತಿಂಗಳ ಕಾಲ ಹತ್ತಾರು ವೈದ್ಯರನ್ನು ಸಂಪರ್ಕಿಸಿ ಪ್ರೊಜೇರಿಯ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುತ್ತ ಹೋದರು. ಆ ಕಾಯಿಲೆ ಇರುವ ಮಕ್ಕಳನ್ನು, ಅವರ ಕುಟುಂಬಗಳನ್ನು ಭೇಟಿ ಮಾಡಿ ಬಂದರು. ಅವರ ಒಳಗೆ ಕೂಡ ಆ ಔರೋ ಪಾತ್ರವು ಆಗಲೇ ಇಳಿಯಲು ಆರಂಭ ಆಗಿತ್ತು.

ಅಮಿತಾಬ್ ಎಂಬ ಮಹಾ ನಟನ ಬದ್ಧತೆ

2009ರ ಒಂದು ಶುಭ ಮುಹೂರ್ತದಲ್ಲಿ ಪಾ ಸಿನಿಮಾದ ಶೂಟಿಂಗ್ ಆರಂಭ ಆಗಿತ್ತು. ಅಮಿತಾಬ್ ಅವರ ವಿಶೇಷ ಮೇಕಪ್‌ಗಾಗಿ ಕ್ರಿಶ್ಚಿಯನ್ ಟಿನ್ಲೆ ಮತ್ತು ಡೊಮಿನಿ ಲಿನ್ ಎಂಬ ಇಬ್ಬರು ವಿದೇಶದ ಮೇಕಪ್ ಕಲಾವಿದರು ಬಂದರು. ಔರೋ ಪಾತ್ರದ ಮೇಕಪ್ ತುಂಬಾ ಸಂಕೀರ್ಣ ಆಗಿತ್ತು.

ದೊಡ್ಡ ಮಂಡೆ ರಚನೆ ಮಾಡಲು ಎಂಟರಿಂದ ಹತ್ತು ಒದ್ದೆ ಮಣ್ಣಿನ ಹೆಂಟೆಗಳನ್ನು ಅಮಿತಾಬ್ ತಲೆಗೆ ಮೆತ್ತುತ್ತಿದ್ದರು. ಅದರಲ್ಲಿ ಉಸಿರಾಟ ಮಾಡಲು ಎರಡು ರಂಧ್ರಗಳು ಮಾತ್ರ ಇರುತ್ತಿದ್ದವು. ಹಣೆ, ಮುಖ, ಕೆನ್ನೆ, ತುಟಿಗಳಿಗೆ ದಪ್ಪವಾದ ಬಟ್ಟೆಗಳ ಲೇಪನ. ಅದರ ಮೇಲೆ ದಪ್ಪವಾದ ಬಣ್ಣಗಳು. ಪಾತ್ರಕ್ಕಾಗಿ ಕಾಲು, ಕೈ, ಎದೆಯ ಮೇಲಿನ ಕೂದಲನ್ನು ಕೂಡ ಕೆರೆದು ತೆಗೆದಿದ್ದರು.

ಪ್ರತೀ ದಿನ ಮೇಕಪ್ ಮಾಡಲು ಕನಿಷ್ಠ ಐದು ಘಂಟೆ ಮತ್ತು ತೆಗೆಯಲು ಎರಡು ಘಂಟೆಗಳ ಅವಧಿ ಬೇಕಾಗುತ್ತಿತ್ತು. 67 ವರ್ಷದ ಅಮಿತಾಬ್ ರಾತ್ರಿ ಹನ್ನೊಂದು ಗಂಟೆಗೆ ಮೇಕಪ್ ಮಾಡಲು ಕೂತರೆ ಬೆಳಗ್ಗೆ ನಾಲ್ಕೈದು ಗಂಟೆಗೆ ಮೇಕಪ್ ಮುಗಿಯುವುದು. ನಂತರ ಶೂಟಿಂಗ್ ಆರಂಭ. ಮೇಕಪ್ ತೆಗೆಯುವ ತನಕ ಒಂದು ತೊಟ್ಟು ನೀರು ಕೂಡ ಕುಡಿಯುವ ಅವಕಾಶ ಇಲ್ಲ. ಮೈ, ಮುಖ ಎಲ್ಲ ಕಡೆಯೂ ವಿಪರೀತ ತುರಿಕೆ ಮತ್ತು ನವೆ. ಅಮಿತಾಬ್ ಆ ಕನಸಿನ ಪಾತ್ರಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡರು. ನಗುನಗುತ್ತಾ ದಿನವೂ ಶೂಟಿಂಗ್‌ನಲ್ಲಿ ಭಾಗವಹಿಸಿದರು.

ಪ್ರಯೋಗಶೀಲತೆಯ ಇನ್ನೊಂದು ಹೆಸರೇ ಅಮಿತಾಬ್

ಕೆಲವೊಮ್ಮೆ ನನಗೇ ಮುಜುಗರ ಆಗುತ್ತಿತ್ತು. ಭಾರತೀಯ ಸಿನಿಮಾ ರಂಗದ ಸೂಪರ್‌ಸ್ಟಾರ್ ಒಬ್ಬ ಆ ಪ್ರಾಯದಲ್ಲಿ ಆ ರೀತಿಯ ಪ್ರಯೋಗಕ್ಕೆ ಒಳಗಾಗುವುದು ಅಂದರೆ…. ಅದು ಅಮಿತಾಬ್ ಬಚ್ಚನ್ ಅಸ್ತಮಾ ರೋಗಿ ಆಗಿದ್ದರು. ಆ ರೀತಿಯ ತಾಳ್ಮೆ ಮತ್ತು ಬದ್ಧತೆ ಕೇವಲ ಅವರಿಗೆ ಮಾತ್ರ ಸಾಧ್ಯ ಆಗುವಂತದ್ದು.

ಮುಂದೆ ಪಾ ಸಿನಿಮಾ 2009ರ ಡಿಸೆಂಬರ್ ತಿಂಗಳಲ್ಲಿ ಎಲ್ಲ ಕಡೆ ಬಿಡುಗಡೆ ಆಯಿತು. ವಿದೇಶದಲ್ಲಿ ಕೂಡ ಬಿಡುಗಡೆ ಆಯಿತು. ಅದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ದೊಡ್ಡ ಹಿಟ್ ಆಯಿತು. ಆ ಸಕ್ಸಸ್ ದೊರೆಯಲು ಪ್ರಮುಖ ಕಾರಣ ಅದು ಖಂಡಿತವಾಗಿಯೂ ಅಮಿತಾಬ್ ಬಚ್ಚನ್ ಅಭಿನಯ ಮತ್ತು ಲವಲವಿಕೆ. ಆ ನಟನ ಜೀವನೋತ್ಸಾಹ ನಿಜಕ್ಕೂ ಒಂದು ಮಿರಾಕಲ್.

ಇಳಯರಾಜ ಸಂಗೀತ ಕೂಡ ಅದ್ಭುತವೇ ಆಗಿತ್ತು. ಇಡೀ ಸಿನಿಮಾದಲ್ಲಿ ಅಪ್ಪ ಮಗನ ಭಾವನಾತ್ಮಕ ಸಂಬಂಧದ ಅಂಡರ್ ಕರೆಂಟ್ ಇತ್ತು. ಇವೆಲ್ಲವೂ ಸಿನಿಮಾವನ್ನು ಭಾರಿ ಸಕ್ಸಸ್ ಮಾಡಿದವು. ಅಮಿತಾಬ್ ಅಮ್ಮನ ಪಾತ್ರದಲ್ಲಿ ವಿದ್ಯಾ ಬಾಲನ್, ಅಜ್ಜಿಯ ಪಾತ್ರದಲ್ಲಿ ಅರುಂಧತಿ ನಾಗ್ ಅವರದ್ದು ಅತ್ಯಂತ ಸ್ಮರಣೀಯ ಅಭಿನಯ ಸಿನಿಮಾದ ಇನ್ನೊಂದು ಪ್ಲಸ್ ಪಾಯಿಂಟ್.

ಪಾ ಸಿನೆಮಾ ಗೆದ್ದಿತು, ಅಮಿತಾಬ್ ಕೂಡ

ಈ ಸಿನಿಮಾದ ಅಭಿನಯಕ್ಕೆ ಅಮಿತಾಬ್ ಅವರಿಗೆ ಮೂರನೇ ಬಾರಿಗೆ ‘ಅತ್ಯುತ್ತಮ ನಟ’ ರಾಷ್ಟ್ರಪ್ರಶಸ್ತಿ ದೊರೆಯಿತು. ಹಾಗೆಯೇ ಐದನೇ ಫಿಲ್ಮ್‌ಫೇರ್ ಅತ್ಯುನ್ನತ ನಟ ಪ್ರಶಸ್ತಿ ಕೂಡ ದೊರೆಯಿತು. ಅದು ಅಮಿತಾಬ್ ಬಚ್ಚನ್ ಅವರ ಬದ್ಧತೆ ಮತ್ತು ಪ್ರಯೋಗಶೀಲತೆಗೆ ದೊರೆತ ನಿಜವಾದ ಪ್ರಶಸ್ತಿ ಆಗಿತ್ತು.
ಈ ರೀತಿಯ ಸವಾಲು ಎದುರಿಸುವ ಶಕ್ತಿ ನಿಮಗೆ ಹೇಗೆ ಬಂತು? ಎಂದು ಪತ್ರಿಕೆಯವರು ಅಮಿತಾಬ್ ಅವರನ್ನು ಕೇಳಿದಾಗ ಅವರು ಕೊಟ್ಟ ಕಾರಣ ಅದ್ಭುತವೇ ಆಗಿತ್ತು.

ನೀನು ಆರಂಭ ಮಾಡಿದ ಯುದ್ಧವನ್ನು ನೀನೇ ಗೆಲ್ಲಬೇಕು

ʼನಾನು ಚಿಕ್ಕದಿರುವಾಗ ಒಮ್ಮೆ ನನ್ನ ಗೆಳೆಯರ ಕೈಯ್ಯಲ್ಲಿ ಪೆಟ್ಟು ತಿಂದು ಅಳುತ್ತಾ ಮನೆಗೆ ಬಂದಿದ್ದೆ. ಆಗ ಅಮ್ಮ ತೇಜಿ ಬಚ್ಚನ್ ನನಗೆ ಬೈದು ಒಂದು ಮಾತನ್ನು ಹೇಳಿದ್ದರು, ಮಗನೇ ಇನ್ನು ಎಂದಿಗೂ ಅಳುತ್ತ ನನ್ನ ಮುಂದೆ ಬಂದು ನಿಲ್ಲಬೇಡ. ನೀನು ಆರಂಭ ಮಾಡಿದ ಯುದ್ಧವನ್ನು ನೀನೇ ಗೆಲ್ಲಬೇಕು ಎಂದುʼ.
ಪಾ ಸಿನಿಮಾದ ಮೂಲಕ ಅಮಿತಾಬ್ ಬಚ್ಚನ್ ಮತ್ತೆ ಕೀರ್ತಿಯ ಶಿಖರ ಏರಿದರು.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top