ಬಿಜೆಪಿಗೆ ರಾಜ್ಯದಲ್ಲಿ ಹೊಸದಾಗಿ 50 ಲಕ್ಷ ಸದಸ್ಯರ ಸೇರ್ಪಡೆ

ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿ ಎಂದು ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಗೆ ಹೊಸದಾಗಿ 50 ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ ಎಂದು ಪಕ್ಷ ಹೇಳಿಕೊಂಡಿದೆ. ಸದಸ್ಯತ್ವ ಅಭಿಯಾನದಲ್ಲಿ 50 ಲಕ್ಷ ಮಂದಿ ಬಿಜೆಪಿಗೆ ನೋಂದಣಿಯಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ವಿಜಯೇಂದ್ರ ಅಧ್ಯಕ್ಷತೆಯಲ್ಲಿ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ, ಪದಾಧಿಕಾರಿಗಳ ಸಹಕಾರ ಹಾಗೂ ಶ್ರಮದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.































 
 

2014ರಲ್ಲಿ ಆನ್‍ಲೈನ್ ಮೂಲಕ ಸದಸ್ಯತ್ವ ಅಭಿಯಾನ ಆರಂಭವಾಗಿತ್ತು. 2019ರಲ್ಲಿ ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಮಾಡುತ್ತಿದ್ದು, ಈ ಬಾರಿ ಸದಸ್ಯತ್ವ ಅಭಿಯಾನಕ್ಕೆ ಸಮಿತಿಯನ್ನೂ ರಚಿಸಲಾಗಿದೆ. ಸಂಸದ ಪಿ.ಸಿ.ಮೋಹನ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಪ್ರತಾಪಸಿಂಹ ನಾಯಕ್ ಮತ್ತು ನಾನು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಪ್ರತಿ ಜಿಲ್ಲೆಗೆ ಹಿರಿಯ ನಾಯಕರನ್ನು ಇನ್‌ಚಾರ್ಜ್ ಆಗಿ ನೇಮಿಸಲಾಗಿದೆ ಎಂದರು.
ಹಿಂದೆ ಸದಸ್ಯತ್ವ ಮಾಡಿದಾಗ ಕೇವಲ ಮಿಸ್ಡ್ ಕಾಲ್ ಕೊಡುವ ಪದ್ಧತಿ ಇತ್ತು. ಈ ಬಾರಿ ಮಿಸ್ಡ್ ಕಾಲ್ ಬಳಿಕ ಲಭಿಸುವ ಲಿಂಕ್ ಮೂಲಕ ಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ವಿಳಾಸ, ಕುಟುಂಬದ ಮಾಹಿತಿ, ವಿಧಾನಸಭಾ ಕ್ಷೇತ್ರ, ಬೂತ್ ವಿವರ, ಇ-ಮೇಲ್ ಐಡಿಯನ್ನೂ ಪಡೆಯಲಾಗುತ್ತಿದೆ. ಪ್ರಧಾನಿಯವರ ವಿಕಸಿತ ಭಾರತದ ಕಲ್ಪನೆಯಂತೆ ಆ ಗುರಿಯತ್ತ ಹೆಜ್ಜೆ ಇಡಲು ಈ ಅಭಿಯಾನ ನಡೆದಿದೆ. ರಾಷ್ಟ್ರಮಟ್ಟದಲ್ಲಿ ಇವತ್ತಿಗೆ 9 ಕೋಟಿ 22 ಲಕ್ಷ 11 ಸಾವಿರ ಸದಸ್ಯತ್ವ ಪೂರ್ಣಗೊಂಡಿದೆ. ನಮ್ಮ ಗುರಿ 11 ಕೋಟಿ ಇದ್ದು, ಅದಕ್ಕೂ ಮೀರಿ ಸದಸ್ಯತ್ವ ಪಡೆಯಲು ಜನರು ಉತ್ಸುಕರಾಗಿದ್ದಾರೆ. ಸದಸ್ಯತ್ವ ಅಭಿಯಾನವನ್ನು ಅ. 15ರ ಬದಲಾಗಿ ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ರಾಜ್ಯಾಧ್ಯಕ್ಷರು, ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ನಾವು, ಎಲ್ಲ ನಾಯಕರು ಕೂಡ ಪ್ರವಾಸ ಮಾಡುತ್ತೇವೆ ಎಂದು ಹೇಳಿದರು.
ವಿಜಯೇಂದ್ರ ಮಾತನಾಡಿ, ಈ ವರ್ಷವೇ 50 ಲಕ್ಷ ಸದಸ್ಯರು ನೋಂದಣಿಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯನ್ನು ತಲುಪುವ ಭರವಸೆಯಿದೆ. ಹೊಸ ಸದಸ್ಯರ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಜನರು ಹೆಚ್ಚಾಗಿದ್ದು, ನಮ್ಮ ಪಕ್ಷಕ್ಕೆ ಸೇರಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತಿದೆ. ಇದು ನಮ್ಮ ಮೇಲೆ ಅವರ ನಂಬಿಕೆಯನ್ನು ತೋರಿಸುತ್ತದೆ. ಇದರೊಂದಿಗೆ ನಾವು ನಮ್ಮ ಪಕ್ಷವನ್ನು ಬಲಪಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top