ಮಸೀದಿಯೊಳಗೆ ಜೈ ಶ್ರೀರಾಮ್‌ ಕೂಗುವುದು ಧಾರ್ಮಿಕ ಅಪಚಾರವಲ್ಲ : ಹೈಕೋರ್ಟ್‌ ತೀರ್ಪು

ಕಡಬದ ಇಬ್ಬರು ಯುವಕರ ಮೇಲಿನ ಪ್ರಕರಣ ವಜಾಗೊಳಿಸಿದ ನ್ಯಾಯಾಲಯ

ಬೆಂಗಳೂರು : ಮಸೀದಿಯೊಳಗೆ ಜೈ ಶ್ರೀ ರಾಮ್ ಎಂದು ಕೂಗುವುದರಿಂದ ಯಾರದ್ದೇ ಧಾರ್ಮಿಕ ಭಾವನೆಗೆ ಅಪಚಾರವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿ ಕಡಬದ ಬಿಳಿನೆಲೆಯ ಇಬ್ಬರು ಯುವಕರ ವಿರುದ್ಧ ದಾಖಲಾಗಿದ್ದ ಕೇಸನ್ನು ವಜಾಗೊಳಿಸಿದೆ. ಕಳೆದ ತಿಂಗಳು ಈ ತೀರ್ಪು ನೀಡಲಾಗಿದ್ದು, ಕೋರ್ಟಿನ ವೆಬ್‌ಸೈಟಿನಲ್ಲಿ ಮಂಗಳವಾರ ಅಪ್‌ಲೋಡ್‌ ಮಾಡಲಾಗಿದೆ.
ಹೈಕೋರ್ಟ್‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ತೀರ್ಪು ನೀಡಿ ಕಡಬ ಬಿಳಿನೆಲೆ ನಿವಾಸಿಗಳಾದ ಕೀರ್ತನ್ ಕುಮಾರ್ ಮತ್ತು ಸಚಿನ್ ಕುಮಾರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295ಎ, 447 ಮತ್ತು 506 ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಕಡಬ ಪೊಲೀಸರು ಈ ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.
2023ರ ಸೆಪ್ಟೆಂಬರ್‌ 24ರಂದು ರಾತ್ರಿ 10.50ರ ವೇಳೆಗೆ ಕಡಬದ ಮರ್ಧಾಳದಲ್ಲಿರುವ ಮಸೀದಿಯ ಆವರಣಕ್ಕೆ ಕೆಲವು ಕಿಡಿಗೇಡಿಗಳು ನುಗ್ಗಿ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿ ಬೆದರಿಕೆಯೊಡ್ಡಿದ್ದಾರೆ ಎಂದು ಮಸೀದಿಯವರು ನೀಡಿದ ದೂರಿನನ್ವಯ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಿಸಿಟಿವಿಯಲ್ಲಿ ಮಸೀದಿ ಪರಿಸರದಲ್ಲಿ ಒಂದು ಡಸ್ಟರ್‌ ಕಾರು ಕಾರು ಮತ್ತು ಕೆಲವು ದ್ವಿಚಕ್ರ ವಾಹನಗಳು ಓಡಾಡುತ್ತಿರುವುದು ಸೆರೆಯಾಗಿತ್ತು. ಅಜ್ಞಾತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರೂ ಪೊಲೀಸರು ಈ ಇಬ್ಬರು ಯುವಕರನ್ನು ಆರೋಪಿಗಳೆಂದು ಹೆಸರಿಸಿದ್ದರು.
ಯಾರಾದರೂ ಜೈ ಶ್ರೀರಾಮ್ ಎಂದು ಕೂಗಿದರೆ ಅದು ಯಾವುದೇ ವರ್ಗದ ಧಾರ್ಮಿಕ ಭಾವನೆಯನ್ನು ಹೇಗೆ ಕೆರಳಿಸುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಈ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ದೂರುದಾರರೇ ಹೇಳಿದ್ದಾರೆ. ಹೀಗಿರುವಾಗ ಐಪಿಸಿ 295ಎ ಅಡಿಯಲ್ಲಿ ಪೊರಕರಣ ಮುಂದುವರಿದರೆ ಅದು ದ್ವೇಷಕ್ಕೆ ಕಾರಣವಾಗಬಹುದು. ಜೈಶ್ರೀರಾಮ್‌ ಎಂದು ಕೂಗುವುದು ಧಾರ್ಮಿಕ ಅವಹೇಳನ ಅಲ್ಲದಿರುವುದರಿಂದ ಈ ಪ್ರಕರಣ ಸೆಕ್ಷನ್‌ 295ಎ ಅಡಿಯಲ್ಲಿ ಬರುವುದಿಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top