ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಪರಮೇಶ್ವರ್ ಉಡಾಫೆ ಹೇಳಿಕೆ
ಬೆಂಗಳೂರು : ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತವಾಗಿ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ಬೆಂಗಳೂರಲ್ಲಿ ಕೆಲ ದಿನಗಳಿಂದ ಭೀಕರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮನೆ, ಅಂಗಡಿ, ಮಾಲ್‌ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಶಾಲೆ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಮಳೆಯಿಂದಾಗಿ ರಸ್ತೆಗಳು ಹದಗೆಟ್ಟು ಓಡಾಡದ ಪರಿಸ್ಥಿತಿ ಉಂಟಾಗಿದೆ. ಜನರು ಸಮರ್ಪಕ ವ್ಯವಸ್ಥೆ ಮಾಡದ ಸರಕಾರ ಮತ್ತು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗೃಹ ಸಚಿವ ಪರಮೇಶ್ವರ್ ಮಳೆ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಬೆಂಗಳೂರು ಮಳೆ ಅನಿರೀಕ್ಷಿತ, ಇದು ನಮಗೆ ಆಶ್ಚರ್ಯವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಇಷ್ಟು ಮಳೆ ಬರುತ್ತಾ ಇದೆ ಅಂದ್ರೆ ನಂಬೋಕೆ ಆಗ್ತಿಲ್ಲ. ಇಂತಹ ಮಳೆ ಬಂದರೆ ಎಂಥಾ ಸಿಟಿ ಆದರೂ ಅಸ್ತವ್ಯಸ್ತ ಆಗುತ್ತದೆ. ನ್ಯೂಯಾರ್ಕ್‌ನಲ್ಲಿ ಆಗಲ್ವಾ? ಲಂಡನ್‌ನಲ್ಲಿ ಆಗಿಲ್ವ? ಯಾವುದೇ ಸಿಟಿ ಆದ್ರೂ ಅಷ್ಟೆ. ಬೆಂಗಳೂರಿನಲ್ಲಿ ಹಾಗೆ ಆಗ್ತಿದೆ. ಮುಂದೇನೂ ಆಗುತ್ತಾ ಇರುತ್ತೆ. ಇದನ್ನು ಮ್ಯಾನೇಜ್ ಮಾಡಬೇಕು. ಮಳೆ ಬಂದಾಗ ನೀರನ್ನು ವಾಪಸ್ ಆಕಾಶಕ್ಕೆ ಕಳಿಸೋಕೆ ಆಗಲ್ಲ. ಭೂಮಿ ಮೇಲೆ ಹರಿದು ಹೋಗಬೇಕು ಎಂದಿದ್ದಾರೆ ಪರಮೇಶ್ವರ್.
ಅವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಜನರು ಸರಕಾರದ ವೈಫಲ್ಯವನ್ನು ಲೇವಡಿ ಮಾಡುತ್ತಿದ್ದಾರೆ.