ಉಪಚುನಾವಣೆ : ಪ್ರತಿಷ್ಠೆಯೇ ಪಣ

ಗೆದ್ದು ಬೀಗುವ ತವಕದಲ್ಲಿ ಕಾಂಗ್ರೆಸ್‌, ಬಿಜೆಪಿ-ಜೆಡಿಎಸ್‌

ಬೆಂಗಳೂರು: ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆ ಚುನಾವಣೆ ಜೊತೆಗೆ ಕರ್ನಾಟಕದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೂ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡುವುದರೊಂದಿಗೆ ರಾಜ್ಯದಲ್ಲೂ ಚುನಾವಣಾ ಕಾವು ಶುರುವಾಗಿದೆ.
ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದೆ. ಈ ಮೂರು ಕ್ಷೇತ್ರಗಳು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿಯ ಕ್ಷೇತ್ರಗಳು.

ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವೆ ವಿವಿಧ ಹಗರಣಗಳ ಕುರಿತಂತೆ ತೀವ್ರ ಆರೋಪ-ಪ್ರತ್ಯಾರೋಪ ನಡೆಯುತ್ತಿರುವ ನಡುವಲ್ಲೇ ಉಪಚುನಾವಣೆ ಘೋಷಣೆಯಾಗಿರುವುದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಲಿದೆ. ಎರಡೂ ಪಕ್ಷಕ್ಕೆ ಉಪಚುನಾವಣೆ ಬಹುಮುಖ್ಯವಾಗಿದೆ. ಎಷ್ಟೇ ಹಗರಣಗಳ ಆರೋಪ ಇದ್ದರೂ ತನಗಿನ್ನೂ ಜನಬೆಂಬಲ ಇದೆ ಎಂದು ತೋರಿಸಿಕೊಡಲು ಕಾಂಗ್ರೆಸ್‌ ಕಾತರದಿಂದ ಇದೆ. ಇದೇ ವೇಳೆ ಒಂದೂವರೆ ವರ್ಷದಲ್ಲೇ ಕಾಂಗ್ರೆಸ್‌ ಜನರ ಒಲವು ಕಳೆದುಕೊಂಡಿದೆ ಎಂದು ಸಾಬೀತುಪಡಿಸಲು ಬಿಜೆಪಿ-ಜೆಡಿಎಸ್‌ ಮೂರು ಕ್ಷೇತ್ರಗಳನ್ನು ಗೆಲ್ಲಲು ಶತಾಯಗತಾಯ ಪ್ರಯತ್ನಿಸಲಿದೆ.































 
 

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ಶಿಗ್ಗಾಂವಿ ಹಾಗೂ ಇ.ತುಕಾರಾಂ ರಾಜೀನಾಮೆಯಿಂದ ಸಂಡೂರು ವಿಧಾನಸಭಾ ಕ್ಷೇತ್ರ ತೆರವಾಗಿದೆ. ವೈಯಕ್ತಿಕವಾಗಿ ಈ ಕ್ಷೇತ್ರಗಳು ಎಚ್‌ಡಿಕೆ ಹಾಗೂ ಬೊಮ್ಮಾಯಿಗೆ ಪ್ರತಿಷ್ಠೆಯ ಪ್ರಶ್ನೆಗಳಾಗಿವೆ. ಇನ್ನು ಚನ್ನಪಟ್ಟಣ ಡಿ.ಕೆ.ಶಿವಕುಮಾರ್ ತವರು ಜಿಲ್ಲೆಗೆ ಸೇರಿರುವ ಕಾರಣ ಅದೂ ಕೂಡ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಡಿಕೆಶಿ ಸಹೋದರ ಡಿ.ಕೆ.ಸುರೇಶ್‌ ಹೀನಾಯವಾಗಿ ಸೋತಿದ್ದು, ಈ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಗೆಲ್ಲುವುದು ಡಿಕೆಶಿ ಪಾಲಿಗೆ ಅನಿವಾರ್ಯವಾಗಿದೆ. ಮೂರು ಕ್ಷೇತ್ರಗಳ ಚುನಾವಣೆ ಫಲಿತಾಂಶ ಸರಕಾರದ ಸ್ಥಿರತೆ ಮೇಲೆ ಪರಿಣಾಮ ಬೀರುವುದಿಲ್ಲವಾದರೂ ರಾಜ್ಯದ ನಾಯಕರಿಗೆ ಮಾತ್ರ ಪ್ರತಿಷ್ಠೆಯೇ ಇಲ್ಲಿ ಪಣವಾಗಿದೆ. ಹೀಗಾಗಿ ತೀವ್ರ ಸೆಣಸಾಟ ನಿರೀಕ್ಷಿಸಲಾಗಿದೆ.

ಈ ತಿಂಗಳು 18ರಂದು ಉಪಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, 25ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. 28ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. 30ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ನ.13ರಂದು ಚುನಾವಣೆ ನಡೆಯಲಿದ್ದು, ನ.23ರಂದು ಮತ ಎಣಿಕೆ ನಡೆಯಲಿದೆ.

ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಿಗೆ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ಶುರು ಮಾಡಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ಇ.ತುಕಾರಾಂ ಅವರ ಪತ್ನಿ ಅಥವಾ ಮಗಳಿಗೆ ಟಿಕೆಟ್ ಸಿಗುವ ನಿರೀಕ್ಷೆಯಿದೆ.
ಸಂಡೂರು ಕ್ಷೇತ್ರದಲ್ಲಿ ಗೆಲ್ಲಲು ಮತ್ತು ಈ ಗೆಲುವನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಲು ಬಿಜೆಪಿ ನಾಯಕರು ಉತ್ಸುಕರಾಗಿದ್ದಾರೆ. ಹೀಗಾಗಿ ಸೂಕ್ತ ಅಭ್ಯರ್ಥಿಗಳಿಗಾಗಿ ಪಕ್ಷ ಹುಡುಕಾಟ ನಡೆಸುತ್ತಿದೆ. ಮಾಜಿ ಸಚಿವ ಬಿ.ಶ್ರೀರಾಮುಲು ಹೆಸರು ಬಲವಾಗಿ ಕೇಳಿ ಬರುತ್ತಿದೆ.
ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್‌ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬಿಜೆಪಿ-ಜೆಡಿಎಸ್‌ ಪಾಲಿಗೆ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆ ತಲೆನೋವಾಗಿದೆ. ಒಂದೆಡೆ ಸಿ.ಪಿ.ಯೋಗೀಶ್ವರ್‌ ಟಿಕೆಟಿಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಎಚ್‌ಡಿಕೆಗೆ ಪುತ್ರ ನಿಖಿಲ್‌ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ಇಚ್ಚೆಯಿದೆ. ಶಿಗ್ಗಾಂವಿಯಿಂದ ಬೊಮ್ಮಾಯಿಯವರ ಪುತ್ರ ಕಣಕ್ಕಿಳಿಯುವ ಸಾಧ್ಯತೆಯಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top