ಬಿಜೆಪಿ ಇವಿಎಂ ಜೊತೆ ಆಟವಾಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ
ಹೊಸದಿಲ್ಲಿ: ಇಸ್ರೇಲ್ ಉಗ್ರರ ಪೇಜರ್ ಸ್ಫೋಟಿಸಿದಂತೆ ನರೇಂದ್ರ ಮೋದಿ ಇವಿಎಂ ಹ್ಯಾಕ್ ಮಾಡಬಹುದು ಎಂದು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಇಸ್ರೇಲ್ ಪೇಜರ್ ಮತ್ತು ವಾಕಿಟಾಕಿ ಬಳಸಿ ಜನರನ್ನು ಕೊಲ್ಲಲು ಸಾಧ್ಯವಾದರೆ ಇವಿಎಂ ಅನ್ನು ಏನು ಬೇಕಾದರೂ ಮಾಡಬಹುದು. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳು ಪೇಪರ್ ಬ್ಯಾಲೆಟ್ ಮೂಲಕ ಮತ ಚಲಾಯಿಸುವಂತೆ ಒತ್ತಾಯಿಸಬೇಕು, ಅಲ್ಲಿ ಬಿಜೆಪಿ ಸರ್ಕಾರ ಮತ್ತು ಚುನಾವಣಾ ಆಯೋಗ ಏನು ಬೇಕಾದರೂ ಮಾಡಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. .
ಇವಿಎಂನಲ್ಲಿ ಏನು ಬೇಕಾದರೂ ಆಡಬಹುದು. ಹೀಗಾಗಿ ಚುನಾವಣೆಗೂ ಮುನ್ನ ಬಿಜೆಪಿ ಈ ಆಟವನ್ನು ಆಡುತ್ತಿದೆ. ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಬಿಜೆಪಿಯ ಒತ್ತಡದಲ್ಲಿದೆ ಎಂದು ಆರೋಪಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈ ಆರೋಪವನ್ನು ತಳ್ಳಿಹಾಕಿದ್ದು, ಕ್ಯಾಲ್ಕುಲೇಟರ್ನಲ್ಲಿ ಬಳಸುವಂತೆ ಇವಿಎಂನಲ್ಲಿ ಸಿಂಗಲ್ ಬಳಕೆ ಮಾಡುವ ಬ್ಯಾಟರಿಯನ್ನು ಬಳಸಲಾಗುತ್ತದೆ ಹೊರತು ಮೊಬೈಲ್ ಬ್ಯಾಟರಿಗಳನ್ನು ಬಳಸಲಾಗುವುದಿಲ್ಲ. ಪೇಜರ್ಗಳನ್ನು ಸಂಪರ್ಕಿಸಬಹುದು. ಆದರೆ ಇವಿಎಂ ಸಂರ್ಪಕಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇವಿಎಂಗಳು ಬ್ಯಾಟರಿ ಸೇರಿದಂತೆ ಮೂರು ಹಂತದ ಭದ್ರತೆಯನ್ನು ಹೊಂದಿವೆ. ಇವಿಎಂಗಳ ಮೊದಲ ಹಂತದ ಪರಿಶೀಲನೆ ಮತದಾನ ನಡೆಯುವ 5-6 ತಿಂಗಳ ಮೊದಲು ಪ್ರಾರಂಭವಾಗುತ್ತದೆ. ಮತದಾನ ನಡೆಯುವ 5-6 ದಿನಗಳ ಮೊದಲು ಇವಿಎಂ ಕಾರ್ಯಾರಂಭಗೊಳ್ಳುತ್ತದೆ. ಆ ದಿನ ಹೊಸ ಬ್ಯಾಟರಿಯನ್ನು ಸೇರಿಸಲಾಗುತ್ತದೆ. ಯಂತ್ರವನ್ನು ಸೀಲ್ ಮಾಡಿದ ನಂತರ, ರಾಜಕೀಯ ಪಕ್ಷಗಳ ಏಜೆಂಟ್ಗಳು ಇವಿಎಂ ಮತ್ತು ಬ್ಯಾಟರಿಗೆ ಸಹಿ ಹಾಕುತ್ತಾರೆ. ಇವಿಎಂಗಳನ್ನು ನಂತರ ಸ್ಟ್ರಾಂಗ್ ರೂಮ್ಗಳಿಗೆ ಸಾಗಿಸಲಾಗುತ್ತದೆ ಮತ್ತು ಏಜೆಂಟ್ಗಳ ಮುಂದೆ ಡಬಲ್ ಲಾಕ್ ಮಾಡಲಾಗುತ್ತದೆ. ಇಡೀ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.