ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗಿರುವುದಕ್ಕೆ ಸಾಕ್ಷಿ ಇಲ್ಲ ಎಂದ ನ್ಯಾಯಾಲಯ
ಹೊಸದಿಲ್ಲಿ: ಕೋವಿಡ್ ಲಸಿಕೆಗಳಿಂದ ಆರೋಗ್ಯದ ಮೇಲಾಗುವ ಅಡ್ಡ ಪರಿಣಾಮಗಳ ಕುರಿತು ತನಿಖೆ ಮಾಡಲು ಆಗ್ರಹಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇದು ಗೊಂದಲ ಉಂಟು ಮಾಡಿ ಪ್ರಚಾರ ಪಡೆಯುವ ಹುನ್ನಾರ ಎಂದು ಹೇಳಿ ವಜಾಗೊಳಿಸಿದೆ.
ಕೋವಿಡ್ ಲಸಿಕೆಗಳು ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದರು. ಯುನೈಟೆಡ್ ಕಿಂಗ್‌ಡಂನಂತಹ ದೇಶಗಳಲ್ಲಿ ಅದೇ ಕಾಳಜಿಯ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದರು.
ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆ ನಡೆಸಿತ್ತು. ಸಾಂಕ್ರಾಮಿಕ ಬಿಕ್ಕಟ್ಟನ್ನು ನಿವಾರಿಸಲು ಲಸಿಕೆ ಜಾಗತಿಕವಾಗಿ ನೆರವು ನೀಡಿವೆ. ನಾನು ಸ್ವತಹ ಕೋವಿಡ್ ಲಸಿಕೆ ತೆಗೆದುಕೊಂಡಿದ್ದು, ಇಷ್ಟರ ತನಕ ಯಾವುದೇ ಅಡ್ಡ ಪರಿಣಾಮ ಗೋಚರಿಸಿಲ್ಲ. ಈಗ ಅಂತಹ ಅರ್ಜಿಗಳನ್ನು ಸಲ್ಲಿಸುವುದು ಸೂಕ್ತವಲ್ಲ ಎಂದು ಸಿಜೆಐ ತೀರ್ಪಿನಲ್ಲಿ ಹೇಳಿದ್ದಾರೆ.
ಅರ್ಜಿದಾರರು ನಿಜವಾಗಿಯೂ ಲಸಿಕೆಯ ಸಂತ್ರಸ್ತರಾಗಿದ್ದರೆ ಆರ್ಟಿಕಲ್ 32ರಡಿಯಲ್ಲಿ ಅರ್ಜಿಗಳನ್ನು ಸಲ್ಲಿಸುವ ಬದಲು ಕ್ಲಾಸ್ ಆಕ್ಷನ್ ಸೂಟ್‌ಗಳನ್ನು ಸಲ್ಲಿಸಬೇಕು ಎಂದು ಸಿಜೆಐ ಹೇಳಿದರು. ‘ಲಸಿಕೆ ತೆಗೆದುಕೊಂಡ ನಂತರ ಅರ್ಜಿದಾರರು ವೈಯಕ್ತಿಕವಾಗಿ ಯಾವುದೇ ಅಡ್ಡಪರಿಣಾಮಗಳಿಂದ ಬಳಲುತ್ತಿದ್ದಾರೆಯೇ’ ಎಂದು ನ್ಯಾಯಮೂರ್ತಿ ಪರ್ದಿವಾಲಾ ಪ್ರಶ್ನಿಸಿದರು. ಅದಕ್ಕೆ ವಕೀಲರು ನಕಾರಾತ್ಮಕವಾಗಿ ಉತ್ತರಿಸಿದ್ದಾರೆ.
ಬ್ರಿಟಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ, ಯುಕೆ ಹೈಕೋರ್ಟ್‌ನಲ್ಲಿ 51 ಮೊಕದ್ದಮೆಯನ್ನು ಎದುರಿಸುತ್ತಿದೆ. ಲಸಿಕೆಯಿಂದಾಗಿ ಸಾವುನೋವುಗಳಾಗಿವೆ ಎಂದು ಆರೋಪಿಸಿ ಕೇಸ್ ದಾಖಲಿಸಲಾಗಿದೆ. ಕಂಪನಿಯು ಕೋವಿಡ್ ಲಸಿಕೆ ಅಪರೂಪದ ಸನ್ನಿವೇಶಗಳಲ್ಲಿ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ನೊಂದಿಗೆ ಥ್ರಂಬೋಸಿಸ್ ಎಂಬ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಕಂಪನಿಯೂ ಒಪ್ಪಿಕೊಂಡಿದೆ. ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ‘ಕೋವಿಶೀಲ್ಡ್’ ಲಸಿಕೆಯನ್ನು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದೆ.