ಬಾಬಾ ಸಿದ್ದಿಕಿ ಹತ್ಯೆ ನಂತರ ನಟನಿಗೆ ದಿನದ 24 ತಾಸು ಸಶಸ್ತ್ರ ಪೊಲೀಸರ ಸರ್ಪಗಾವಲು
ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಆಪ್ತರಾಗಿದ್ದ ಮಾಜಿ ಸಚಿವ ಬಾಬಾ ಸಿದ್ದಿಕಿಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹತ್ಯೆ ಮಾಡಿದ ಬಳಿಕ ನಟ ಪ್ರಾಣ ಭೀತಿ ಎದುರಿಸುತ್ತಿದ್ದು, ಅವರ ಭದ್ರತೆಯನ್ನು Y+ ಕ್ಯಾಟಗರಿಗೆ ಏರಿಸಲಾಗಿದೆ.
ಪೊಲೀಸ್ ಬೆಂಗಾವಲು ವಾಹನ ಈಗ ದಿನದ 24 ತಾಸು ಸಲ್ಮಾನ್ ಖಾನ್ ಅವರ ವಾಹನದ ಜೊತೆಗೆ ಇರಲಿದೆ. ಎಲ್ಲ ಶಸ್ತ್ರಾಸ್ತ್ರಗಳನ್ನು ಬಳಸಲು ತರಬೇತಿ ಪಡೆದ ಪೊಲೀಸ್ ಸಿಬ್ಬಂದಿ ಅವರ ಜೊತೆಯಲ್ಲಿದ್ದಾರೆ. ಸಲ್ಮಾನ್ ಖಾನ್ ಚಿತ್ರೀಕರಣಕ್ಕಾಗಿ ಭೇಟಿ ನೀಡುವ ಯಾವುದೇ ಪ್ರದೇಶದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಅವರ ಇರುವಿಕೆಯ ಬಗ್ಗೆ ಸೂಚನೆ ನೀಡಲಾಗುತ್ತದೆ. ಪೊಲೀಸ್ ತಂಡವು ಶೂಟಿಂಗ್ ಸ್ಥಳವನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಗಾರಿಕೆಯನ್ನು ವಹಿಸಿಕೊಂಡ ನಂತರ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಸಲ್ಮಾನ್ ಖಾನ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಬಂದೂಕಿನ ಗುರಿಯಲ್ಲಿದ್ದಾರೆ. ಕೆಲವು ಸಲ ಅವರ ಹತ್ಯಾ ಯತ್ನ ನಡೆದಿದೆ.
ಮುಂಬಯಿಯ ಹೊರವಲಯದ ಪನ್ವೇಲ್‌ನಲ್ಲಿರುವ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ಗೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಫಾರ್ಮ್‌ಹೌಸ್ ಒಳಗೆ ಮತ್ತು ಹೊರಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಫಾರ್ಮ್‌ಹೌಸ್ ಸುತ್ತಲೂ ಓಡಾಡುವ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ.
ಕಳೆದ ಜೂನ್‌ನಲ್ಲಿ ಮುಂಬಯಿ ಪೊಲೀಸರು ಫಾರ್ಮ್‌ಹೌಸ್ ಬಳಿ ಸಲ್ಮಾನ್ ಖಾನ್ ಅವರನ್ನು ಹತ್ಯೆಗೈಯ್ಯುವ ಯೋಜನೆಯನ್ನು ವಿಫಲಗೊಳಿಸಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಖಾನ್ ಅವರನ್ನು ಅವರ ತೋಟದ ಮನೆಯ ಬಳಿ ಅವರ ಕಾರನ್ನು ನಿಲ್ಲಿಸಿ ಎಕೆ -47 ರೈಫಲ್‌ಗಳಿಂದ ಹೊಡೆದು ಕೊಲ್ಲಲು ಯೋಜಿಸಿತ್ತು. ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ ಎರಡು ತಿಂಗಳ ನಂತರ ಈ ಘಟನೆ ಸಂಭವಿಸಿತ್ತು.
ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 18ನೇ ಸೀಸನ್‌ನ್ನು ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಮುಂಬರುವ ವೀಕೆಂಡ್ ಕಾ ವಾರ್ ಸಂಚಿಕೆಗಾಗಿ ಸಲ್ಮಾನ್ ಖಾನ್ ಚಿತ್ರೀಕರಣ ಮಾಡುವಾಗ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗುತ್ತದೆ ಎಂದು ವರದಿಯಾಗಿದೆ.