ಅರ್ಕಾವತಿ ಲೇಔಟ್‌ನಲ್ಲಿ ಅಕ್ರಮ ಎಸಗಿರುವ ಆರೋಪ
ಬೆಂಗಳೂರು : ಹಗರಣಗಳು ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನು ಬಿಡುವಂತೆ ಕಾಣಿಸುತ್ತಿಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಸುಳಿಯಲ್ಲಿ ಸಿಲುಕಿ ಹೈರಾಣಾಗಿರುವ ಸಿದ್ದರಾಮಯ್ಯ ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅರ್ಕಾವತಿ ಲೇಔಟ್ ನಿವೇಶನದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಅರ್ಕಾವತಿ ಲೇಔಟ್‌ನಲ್ಲಿ ನಿವೇಶನ ಪಡೆದಿದ್ದ ಶಿವಲಿಂಗಪ್ಪ, ವೆಂಕಟಕೃಷ್ಣಪ್ಪ, ರಾಮಚಂದ್ರಯ್ಯ, ರಾಜಶೇಖರ್ ಎಂಬವರು ಸಿದ್ದರಾಮಯ್ಯ, ಬಿಡಿಎ ಆಯುಕ್ತ ಹಾಗೂ ಬಿಡಿಎ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅರ್ಕಾವತಿ ಲೇಔಟ್‌ನಲ್ಲಿ ಹಂಚಿಕೆಯಾಗಿದ್ದ ನಿವೇಶನ ಭೂಗಳ್ಳರ ಪಾಲಾಗುತ್ತಿದೆ. ಅಧಿಕಾರ ದುರ್ಬಳಕೆಯಿಂದ ನಿವೇಶನದಾರರಿಗೆ ತೊಂದರೆಯಾಗುತ್ತಿದೆ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಈಗಾಗಲೇ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‌ನಲ್ಲಿ ಸಿದ್ದರಾಮಯ್ಯ ಅವ್ಯವಹಾರ ಎಸಗಿದ್ದಾರೆ ಎಂಬ ಆರೋಪವಿದೆ. ರಿಡೂ ಹೆಸರಿನಲ್ಲಿ ಸಿದ್ದರಾಮಯ್ಯ ಅರ್ಕಾವತಿ ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿ ಹಗರಣ ಎಸಗಿದ್ದಾರೆ ಎಂದು ಬಿಜೆಪಿ-ಜೆಡಿಎಸ್ ಆರೋಪಿಸುತ್ತಿದೆ.