ಪುತ್ತೂರು: ನಗರದ ದರ್ಬೆಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತಪಡಿಸುವ “ನೃತ್ಯೋತ್ಕ್ರಮಣ-2024” ಅ.17 ಗುರುವಾರ ಸಂಜೆ 5.30 ರಿಂದ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿ, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತರಾದ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ದೀಪ ಪ್ರಜ್ವಲನೆ ಮಾಡುವರು. ಮುಖ್ಯ ಅತಿಥಿಯಾಗಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಬಳಿಕ ಯುಗಳ ನೃತ್ಯ- ಕಲಾದೀಪ ನೃತ್ಯ ದಂಪತಿಯಾದ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಅವರಿಂದ “ನೃತ್ಯೋತ್ಕ್ರಮಣ” ನೃತ್ಯ ಪ್ರದರ್ಶನಗೊಳ್ಳಲಿದೆ. ನಾಟ್ಯ ಪ್ರದರ್ಶನದಲ್ಲಿ ವಿಶೇಷವಾಗಿ ಸುಮಂಗಲಾ ರತ್ನಾಕರ ಮಂಗಳೂರು ಅವರು ಕನ್ನಡದಲ್ಲಿ ರಚಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಕುರಿತ ಪದವರ್ಣ ನೃತ್ಯ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಹಿಮ್ಮೇಳದಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು (ನಟುವಾಂಗ), ವಿದ್ವಾನ್ ಗೋಪಾಲಕೃಷ್ಣನ್ ಚೆನ್ನೈ (ಹಾಡುಗಾರಿಕೆ), ವಿದ್ವಾನ್ ವಿನಯ್ ನಾಗರಾಜನ್ ಬೆಂಗಳೂರು (ಮೃದಂಗ), ವಿದ್ವಾನ್ ವಿವೇಕ್ ಕೃಷ್ಣ ಬೆಂಗಳೂರು (ಕೊಳಲು), ಮಂಗಳೂರು ದೇವ್ ಪ್ರೋ ಸೌಂಡ್ಸ್ (ಧ್ವನಿ-ಬೆಳಕು) ಹಾಗೂ ಪುತ್ತೂರು ಭಾವನಾ ಕಲಾ ಆರ್ಟ್ಸ್ (ರಂಗಾಲಂಕಾರ) ಸಹಕರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ವಿದುಷಿ ಪ್ರೀತಿಕಲಾ ಉಪಸ್ಥಿತರಿದ್ದರು.