ಧ್ವಜಗಳಿಗೆ ಈಗಲೇ ಭಾರಿ ಬೇಡಿಕೆ
ಬೆಂಗಳೂರು: ಈ ಬಾರಿ ರಾಜ್ಯೋತ್ಸವ ದಿನವಾದ ನವಂಬರ್ 1ರಂದು ಎಲ್ಲೆಡೆ ಕಡ್ಡಾಯವಾಗಿ ಕನ್ನಡ ಧ್ವಜ ಹಾರಿಸಬೇಕೆಂದು ಸರಕಾರ ಆದೇಶಿಸಿದೆ. ಇದರಿಂದಾಗಿ ಧ್ವಜ ತಯಾರಿಸುವವರಿಗೆ ಈಗಾಗಲೇ ಭಾರಿ ಬೇಡಿಕೆ ಬರಲಾರಂಭಿಸಿದೆ. ಅಂತೆಯೇ ಧ್ವಜದ ಬೆಲೆಯೂ ತುಸು ಹೆಚ್ಚಾಗಿದೆ.
ಎಲ್ಲ ಶಾಲಾ, ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಂಪನಿಗಳು, ಸರಕಾರಿ, ಖಾಸಗಿ ಸಂಸ್ಥೆಗಳು ಕನ್ನಡ ಬಾವುಟವನ್ನು ಕಡ್ಡಾಯವಾಗಿ ಹಾರಿಸಲೇಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜೊತೆಗೆ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಎಲ್ಲೆಡೆಯೂ ಆಚರಿಸಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
2024 ನ.1ಕ್ಕೆ ಕರ್ನಾಟಕ ಏಕೀಕರಣಗೊಂಡು 50 ವರ್ಷವಾಗಲಿದೆ. ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಎಲ್ಲ ಶಾಲೆ-ಕಾಲೇಜು, ಕಂಪನಿಗಳು, ಐಟಿಬಿಟಿ ಕಂಪನಿಗಳು ಹಾಗೂ ಕಾರ್ಖಾನೆಗಳು ಕೂಡ ನವೆಂಬರ್ 1ರಂದು ಕನ್ನಡ ಬಾವುಟ ಹಾರಿಸಲೇಬೇಕೆಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನ.1ಕ್ಕೆ ಕೇವಲ 15 ದಿನಗಳು ಬಾಕಿ ಉಳಿದಿವೆ. ಹೀಗಾಗಿ ಎಲ್ಲ ವರ್ಷಕ್ಕಿಂತ ಈ ವರ್ಷ ಕನ್ನಡ ಬಾವುಟಗಳಿಗೆ ಬೇಡಿಕೆ ಹೆಚ್ಚಿದೆ.
ನವೆಂಬರ್ 1 ಎಂದರೆ ನಮ್ಮ ಕರ್ನಾಟಕಕ್ಕೆ ಬಹಳ ಹೆಮ್ಮೆಯ ದಿನ. ಹಾಗಾಗಿ ಎಲ್ಲ ಕಂಪನಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಕನ್ನಡದ ಧ್ವಜಾರೋಹಣ ಮಾಡಬೇಕು. ಈ ಬಗ್ಗೆ ಆದೇಶ ಕೂಡ ಹೊರಡಿಸಲಾಗುವುದು. ಬೆಂಗಳೂರಿನಲ್ಲಿ ಶೇ 50ರಷ್ಟು ಮಂದಿ ಹೊರಗಿನವರೇ ಇದ್ದಾರೆ. ಅವರು ಕೂಡ ಕನ್ನಡ ಕಲಿತುಕೊಳ್ಳಬೇಕು. ಆ ದಿನ ಕನ್ನಡಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಆಯೋಜಿಸಬೇಕು. ರಾಷ್ಟ್ರಧ್ವಜದ ರೀತಿಯಲ್ಲೇ ಕನ್ನಡದ ಬಾವುಟಕ್ಕೂ ಗೌರವ ಕೊಡಬೇಕು. ಈ ಮೂಲಕ ಕನ್ನಡಕ್ಕೆ ಶ್ರದ್ಧೆ ಹಾಗೂ ಗೌರವವನ್ನು ತೋರಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯಕ್ಕೆ ಜನ ಎಲ್ಲಿಂದಾದರೂ ಬಂದಿರಲಿ, ಈ ನವಂಬರ್ 1ರಂದು ಕರ್ನಾಟಕದ ಹೆಮ್ಮೆಯ ಧ್ವಜವನ್ನು ಕಡ್ಡಾಯವಾಗಿ ಹಾರಿಸಲೇಬೇಕು. ನಮಗೆ ಕನ್ನಡ ದಿನಾಚರಣೆ ಮುಖ್ಯವಾದದ್ದು. ಆ ದಿನ ಎಲ್ಲಾ ಸಂಸ್ಥೆಗಳಲ್ಲಿ, ಖಾಸಗಿ ಕಂಪನಿಗಳು ಈ ನೆಲದ ಕನ್ನಡ ಧ್ವಜವನ್ನು ಹಾರಿಸುವುದು ಕಡ್ಡಾಯ ಎಂದಿದ್ದಾರೆ.