ಜೀವನದಲ್ಲಿ ಈ ತಪ್ಪುಗಳನ್ನು ತಪ್ಪಿಯೂ ಮಾಡಬೇಡಿ!

ತಪ್ಪು ರಿಪೀಟ್ ಆದರೆ ನಾವು ಜನರ ವಿಶ್ವಾಸ ಕಳೆದುಕೊಳ್ಳುತ್ತೇವೆ

ಮಹಾತ್ಮಾ ಗಾಂಧೀಜಿ ಸಪ್ತ ಮಹಾಪಾತಕಗಳ ಬಗ್ಗೆ ಹೇಳಿದ್ದರು. ಆ ಏಳು ಪಾತಕಗಳು ಇಂದಿಗೂ ಪ್ರಸ್ತುತವಾಗಿವೆ. ಮುಂದೆಯೂ ಪ್ರಸ್ತುತವೇ ಆಗಿರುತ್ತವೆ. ಅವುಗಳು ಸಾರ್ವಕಾಲಿಕ ಸತ್ಯಗಳು.

ಪ್ರಮಾದಗಳು, ತಪ್ಪುಗಳು, ಪಾಪಗಳು ಮತ್ತು ಪಾತಕಗಳು

































 
 

ಗೊತ್ತಿಲ್ಲದೆ ಮಾಡುವ ತಪ್ಪುಗಳು ಪ್ರಮಾದಗಳು. ಅವುಗಳಿಗೆ ಕ್ಷಮೆ ಇದೆ. ಗೊತ್ತಿದ್ದೂ ಮಾಡುವುದು ತಪ್ಪುಗಳು. ಆ ತಪ್ಪುಗಳಿಗೆ ಕ್ಷಮೆ ಕೇಳಿ ಒಮ್ಮೆ ತಪ್ಪಿಸಿಕೊಳ್ಳಬಹುದು. ಆದರೆ ಕ್ಷಮಿಸುವ ಅಧಿಕಾರ ನಿಮ್ಮ ತಪ್ಪುಗಳಿಂದ ನೊಂದವರಿಗೆ ಮಾತ್ರ ಇರುತ್ತದೆ. ಅದೇ ತಪ್ಪು ರಿಪೀಟ್ ಆಯ್ತು ಅಂದರೆ ನಾವು ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತೇವೆ.

ಮುಂದಿನದ್ದು ಪಾಪ (Sin). ಅದಕ್ಕೆ ಕ್ಷಮೆ ಮತ್ತು ಪ್ರಾಯಶ್ಚಿತ್ತ ಎರಡೂ ಇರುವುದಿಲ್ಲ. ತಪ್ಪು ಮಾಡ್ತಾ ಇದ್ದೇವೆ ಎಂದು ಗೊತ್ತಿದ್ದೂ ಅದೇ ತಪ್ಪು ಪುನರಾವರ್ತನೆ ಆದರೆ ಅದು ಪಾಪ.

ಅದಕ್ಕಿಂತ ಭಯಾನಕವಾದದ್ದು ಪಾತಕ. ನೈತಿಕ ಸಮಾಜ ಎಂದಿಗೂ ಒಪ್ಪಿಕೊಳ್ಳದ ಮತ್ತು ಉದ್ದೇಶಪೂರ್ವಕವಾಗಿ ಮಾಡುವ ತಪ್ಪುಗಳನ್ನು ನಾವು ಪಾತಕ ಎಂದು ಕರೆಯಬಹುದು. ಅದರ ಕೆಟ್ಟ ಪರಿಣಾಮಗಳು ಸಮಾಜದ ಆರೋಗ್ಯವನ್ನೇ ಕೆಡಿಸುತ್ತವೆ. ಉದಾಹರಣೆಗೆ ಮೌಲ್ಯಗಳು ಇಲ್ಲದ ರಾಜಕಾರಣ ಮಹಾಪಾತಕ ಆಗಿರುತ್ತದೆ.

ಆಧುನಿಕ ಜಗತ್ತಿನ ಮೂವತ್ತು ಮಹಾತಪ್ಪುಗಳು

1) ಯಾವುದೇ ಹೆಣ್ಣಿನ (ಆಕೆ ಎಂತವಳೇ ಆಗಿದ್ದರೂ) ನಡತೆಯ ಬಗ್ಗೆ ಕೆಟ್ಟದ್ದಾಗಿ ಮಾತಾಡುವುದು.
2) ನಂಬಿಕೆಗೆ ಅರ್ಹರು ಅಲ್ಲದ ವ್ಯಕ್ತಿಗಳಿಗೆ, ಅವರು ವಿಶ್ವಾಸಪಾತ್ರರಲ್ಲ ಎಂದು ಗೊತ್ತಾದ ನಂತರವೂ ಸಹಾಯ ಮಾಡಲು ಹೋಗುವುದು.
3) ನಾವು ಬೇರೆಯವರಿಗೆ ಮಾಡಿದ ಉಪಕಾರವನ್ನು ಬಹಿರಂಗವಾಗಿ ಪದೇಪದೆ ಹೇಳಿಕೊಳ್ಳುವುದು.
4) ನಾವು ಯಾರಿಗೋ ಕೈ ಸಾಲ ಕೊಡಲು ಬಾಕಿ ಇರುವಾಗ ಚಂದವಾದ ಮನೆ ಕಟ್ಟಿ ಫೇಸ್‌ಬುಕ್‌ನಲ್ಲಿ ಹಾಕಿಕೊಳ್ಳುವುದು ಅಥವಾ ಹೊಸ ಕಾರು ತೆಗೆದುಕೊಂಡು ಸ್ಟೇಟಸ್ ಹಾಕಿಕೊಳ್ಳುವುದು.
5) ತಮಗೆ ಮಾಡಲು ಸಾಧ್ಯವಾಗದ ವಿಷಯಗಳನ್ನು ಬೋಧನೆಯಾಗಿ ಇನ್ನೊಬ್ಬರಿಗೆ ಹೇಳುವುದು.
6) ಆತ್ಮೀಯರು ಮಾಡಿದ ತಪ್ಪುಗಳನ್ನು, ಅವುಗಳು ತಪ್ಪು ಎಂದು ಗೊತ್ತಾದ ನಂತರವೂ ಸಮರ್ಥನೆ ಮಾಡುವುದು ಮತ್ತು ಅವರ ಪರವಾಗಿ ನಿಲ್ಲುವುದು.
8) ಹಸಿದವರ ಮುಂದೆ ಮತ್ತು ಗೆಜ್ಜೆ ಕಟ್ಟಿ ಕುಣಿಯಲು ಸಿದ್ಧರಾದ ಮಕ್ಕಳ ಮುಂದೆ ಉದ್ದವಾದ ಭಾಷಣ ಮಾಡುವುದು.
9) ಬೇರೆಯವರ ಖಾಸಗಿ ವಿಷಯಗಳಲ್ಲಿ, ಅವರು ಎಷ್ಟೇ ಆತ್ಮೀಯರಾದರೂ ಅನವಶ್ಯಕವಾಗಿ ಮೂಗು ತೂರಿಸುವುದು.
10) ನಮ್ಮ ಮನೆಯ ಗುಟ್ಟುಗಳನ್ನು ಸಾರ್ವಜನಿಕವಾಗಿ ಬಹಿರಂಗವಾಗಿ ಹೇಳುವುದು.
11) ನಾವು ತೆಗೆದುಕೊಂಡ ನಿಲುವುಗಳನ್ನು ಪದೇಪದೆ ಬದಲಾಯಿಸುವುದು ಮತ್ತು ಅವುಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಜಿದ್ದಿಗೆ ಬೀಳುವುದು.
12) ಒಂದು ಸಿನಿಮಾ ನೋಡುವ ಮೊದಲೇ ಅದರ ಬಗ್ಗೆ ಕೆಟ್ಟದಾಗಿ ಫೇಸ್‌ಬುಕ್‌ನಲ್ಲಿ ಬರೆಯುವುದು. ಹಾಗೆಯೇ ಪುಸ್ತಕ ಓದುವ ಮೊದಲೇ ಮುಖಪುಟ ನೋಡಿ ವಿಮರ್ಶೆ ಬರೆಯುವುದು.
13) ಮದುವೆಯ ಉದ್ದೇಶದಿಂದ ಹತ್ತಾರು ಹುಡುಗಿಯರನ್ನು ನೋಡಲು ಹೋಗಿ ಉಪ್ಪಿಟ್ಟು, ಶಿರಾ ತಿಂದು ಬರುವುದು.
14) ಪ್ರತಿಬಾರಿ ಹೋಟೆಲಿಗೆ ಗೆಳೆಯ/ಗೆಳತಿಯ ಜೊತೆಗೆ ಹೋಗಿ, ಚೆನ್ನಾಗಿ ತಿಂದು, ಅವರ ಕೈಯ್ಯಲ್ಲಿ ಬಿಲ್ ಕೊಡಿಸುವುದು ಅಥವಾ ಪರ್ಸ್ ಮರೆತು ಬಂದೆ ಎಂದು ಸುಳ್ಳು ಹೇಳುವುದು.
15) ನಮ್ಮ ಮಕ್ಕಳಿಗೆ ಸಹಜ ಪ್ರೀತಿ ಕೊಡುವ ಬದಲು ಮೊಬೈಲ್, ಬೈಕ್ ಇತ್ಯಾದಿ ಗಿಫ್ಟ್ ಕೊಟ್ಟು ಖುಷಿ ಮಾಡಲು ನೋಡುವುದು.
16) ನಾನು ಜಾಸ್ತಿ ಓದಿಲ್ಲ, ನೀನಾದರೂ ಓದು ಮಗಾ ಎಂದು ನಮ್ಮ ಮಕ್ಕಳಿಗೆ ಪದೇಪದೆ ಹೇಳುವುದು.
17) ನಮ್ಮ ಮಕ್ಕಳನ್ನು ಬೇರೆ ಮಕ್ಕಳ ಜೊತೆ ಅನವಶ್ಯಕ ಹೋಲಿಕೆ ಮಾಡುವುದು.

18) ಬೇರೆಯವರ ವಸ್ತುಗಳನ್ನು ಅವರ ಅನುಮತಿ ಇಲ್ಲದೆ ಉಪಯೋಗ ಮಾಡುವುದು.
19) ನಮ್ಮ ಆತ್ಮೀಯರಿಗೆ ಗಿಫ್ಟ್ ಕೊಡುವಾಗ ಅದರ ದರವನ್ನು ಒತ್ತಿ ಒತ್ತಿ ಹೇಳುವುದು.
20) ಸಿಟ್ಟು ಬಂದಾಗ ಯಾರಿಗಾದ್ರೂ ಫೋನ್ ಮಾಡಿ ಬೈಯ್ಯುವುದು ಅಥವಾ ಪತ್ರ ಬರೆಯುವುದು.
21) ಅಮ್ಮನ ಮುಂದೆ ಹೆಂಡತಿಗೆ ಹಲವು ಬಾರಿ ದುಬಾರಿ ಗಿಫ್ಟ್ ಕೊಡುವುದು.
22) ಮನೆಯವರನ್ನು ಅರ್ಧ ಹೊಟ್ಟೆಯಲ್ಲಿ ಮಲಗಿಸಿ ತಾನು ಹೊರಗೆ ಗೆಳೆಯರ ಜೊತೆಗೆ ಗಟ್ಟಿಯಾಗಿ ಉಂಡು ಪಾರ್ಟಿ ಮಾಡುವುದು.
23) ನಮ್ಮ ಮಿತಿಯನ್ನು ಮೀರಿ ಯಾರಿಗಾದರೂ ಪ್ರಾಮಿಸ್ ಕೊಡುವುದು ಮತ್ತು ಸುಳ್ಳು ಕಾರಣ ಹೇಳಿ ಸಾರಿ ಕೇಳುವುದು.
24) ಅವರು ಇರುವುದೇ ಹಾಗೆ, ಇವರು ಇರುವುದೇ ಹಾಗೆ ಎಂದು ಪೂರ್ವಗ್ರಹಪೀಡಿತವಾಗಿ ಯೋಚಿಸುವುದು.
25) ನಮ್ಮ ಮೇಲೆ ಯಾರಾದ್ರೂ ದಬ್ಬಾಳಿಕೆ ಮಾಡ್ತಾ ಇದ್ದರೂ ಹಲ್ಲುಕಚ್ಚಿ ಸಹಿಸಿಕೊಂಡು ಸುಮ್ಮನೆ ಇರುವುದು.
26) ನಮ್ಮ ಆರ್ಥಿಕ ಮಿತಿಯನ್ನು ಮೀರಿ ಅನಗತ್ಯವಾಗಿ ವಸ್ತುಗಳನ್ನು ಖರೀದಿ ಮಾಡುತ್ತಾ ಹೋಗುವುದು (ಕೊಳ್ಳುಬಾಕತನ).
27) ಎಲ್ಲ ಸಮಸ್ಯೆಗಳಿಗೂ ದುಡ್ಡು ಒಂದೇ ಪರಿಹಾರ ಎಂದು ಬಲವಾಗಿ ನಂಬುವುದು ಮತ್ತು ದುಡ್ಡನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳುವುದು.
28) ರಕ್ತಬಿಸಿಯಿದ್ದಾಗ ಅತಿಯಾಗಿ ದುಡಿದು ಆರೋಗ್ಯವನ್ನು ಕಡೆಗಣಿಸುವುದು.
29) ಯಾರೋ ವೇದಿಕೆಯಲ್ಲಿ ಹೇಳಿದ ಘಟನೆ, ಜೋಕ್ ಅಥವಾ ನೀತಿಕಥೆಗಳನ್ನು ಅವರ ಹೆಸರನ್ನು ಹೇಳದೆ ನಾವು ಬೇರೆ ವೇದಿಕೆಗಳಲ್ಲಿ ಬಳಕೆ ಮಾಡುವುದು. ಯಾರೋ ಕಷ್ಟಪಟ್ಟು ಬರೆದ ಲೇಖನ ಅಥವಾ ವೀಡಿಯೊಗಳನ್ನು ಬರೆದವರ ಹೆಸರು ಕಟ್ ಮಾಡಿ ತಮ್ಮದೇ ಎಂದು ಸ್ಟೇಟಸ್ ಹಾಕಿಕೊಳ್ಳುವುದು.
30) ಬೇರೆಯವರು ನಮ್ಮ ಮೇಲಿನ ನಂಬಿಕೆಯಿಟ್ಟು ಹೇಳಿದ ಗುಟ್ಟುಗಳನ್ನು ಬಹಿರಂಗ ಮಾಡುವುದು.

ಇವುಗಳನ್ನು ಎರಡೆರಡು ಬಾರಿ ಸರಿಯಾಗಿ ಓದಿ. ನೀವು ಅವುಗಳನ್ನು ಮಾಡ್ತಾ ಇದ್ದೀರಿ ಅಂತಾದರೆ ಆದಷ್ಟು ಬೇಗ ನಿಲ್ಲಿಸಿ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top