ಸರಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಎಂದು ಟೀಕೆ
ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಬಿಜೆಪಿ ಘಟಕ ನಡೆಸಿದ ಪ್ರತಿಭಟನೆಯಲ್ಲಿ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಅಶ್ವಥ್ ನಾರಾಯಣ, ಶಾಸಕರಾದ ಎಸ್.ಆರ್ ವಿಶ್ವನಾಥ್, ಸಿ.ಕೆ ರಾಮಮೂರ್ತಿ, ರವಿ ಸುಬ್ರಹ್ಮಣ್ಯ, ಸಂಸದ ಕಾರಜೋಳ, ಎಂಎಲ್‌ಸಿ ರವಿಕುಮಾರ್ ಮೊದಲಾದ ನಾಯಕರು ಪಾಲ್ಗೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ಹೊರಹಾಕಿದ್ದಾರೆ.
ಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲು ನಿರ್ಧಾರ ಕೈಗೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹುಬ್ಬಳ್ಳಿ ಗಲಭೆಯಲ್ಲಿ ದಾಖಲಾಗಿದ್ದವರ ಮೇಲಿನ ಪ್ರಕರಣ ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಪ್ರತಿಭಟನೆ ವೇಳೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಆವತ್ತು ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸಿದ್ದು, ಕಲ್ಲೆಸೆದಿದ್ದರು, ಪೊಲೀಸರ ಕಾಲರ್ ಹಿಡಿದು, ಹಲ್ಲೆ ಮಾಡಿದ್ದರು. ಇದೆಲ್ಲ ಕ್ರಿಮಿನಲ್ ಕೇಸ್‌ಗಳು, ಇದನ್ನೆಲ್ಲ ಸರ್ಕಾರ ವಾಪಸ್ ಪಡೆದಿದೆ. ಈ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ವಿಪರೀತ ಪ್ರೀತಿ, ಇದೇ ತುಷ್ಟೀಕರಣ ನೀತಿ. ಈ ಗಲಭೆಕೋರ ಗುಂಪಿನಲ್ಲಿ ಪಿಎಫ್‌ಐ ಸದಸ್ಯರು ಇದ್ದರು ಎನ್ನಲಾಗಿದೆ, ಎನ್‌ಐಎಗೆ ಈ ಗುಂಪಿನ ಮೇಲೆ ಅನುಮಾನ ಇದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಸಿ.ಟಿ ರವಿ, ಪ್ರಹ್ಲಾದ್ ಜೋಶಿ ಮೇಲಿನ ಕೇಸ್ ವಾಪಸ್ ಪಡೀಲಿಲ್ವಾ ಅಂತಾರೆ, ಸಿ.ಟಿ ರವಿ, ಜೋಶಿ ಭಯೋತ್ಪಾದಕರಾ? ಪ್ರಹ್ಲಾದ್ ಜೋಶಿ, ಭಯೋತ್ಪಾದಕ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲಿ ಸರಕಾರ ಪ್ರಜೆಗಳಿಗೆ ಏನು ಸಂದೇಶ ನೀಡುತ್ತಿದೆ ಎಂಬುದು ಮುಖ್ಯವಾಗುತ್ತದೆ. ಕಾನೂನು ಉಲ್ಲಂಘನೆ ಮಾಡಿದರೂ ಕ್ಷಮೆ ನೀಡುವುದಾದಲ್ಲಿ ಕಾನೂನು ರೀತ್ಯಾ ನಡೆಯುವವರು ಮೂರ್ಖರೆ ಎಂಬ ತರ್ಕ ಕಾಡುತ್ತದೆ