ಹೊಸದಿಲ್ಲಿ : ದಿಲ್ಲಿಯ ಬಳಿಕ ಈಗ ಗುಜರಾತ್‌ನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ವಶವಾಗಿದೆ. ಗುಜರಾತಿನ ಅಂಕಲೇಶ್ವರ ನಗರದ ಗೋದಾಮೊಂದರಿಂದ ಪೊಲೀಸರು 5000 ಕೋ. ರೂ. ಬೆಲೆಬಾಳುವ ಕೊಕೇನ್ ಡ್ರಗ್ ವಶಪಡಿಸಿಕೊಂಡಿದ್ದಾರೆ.
ದಿಲ್ಲಿ ಮತ್ತು ಗುಜರಾತ್ ಪೊಲೀಸರು ಆವ್ಕರ್ ಡ್ರಗ್ಸ್ ಲಿಮಿಟೆಡ್ ಕಂಪನಿಯ ಗೋದಾಮಿಗೆ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ಮಾಡಿದಾಗ 518 ಕೆಜಿ ಕೊಕೇನ್ ವಶವಾಗಿದೆ. ಇದರ ಈಗಿನ ಮಾರುಕಟ್ಟೆ ಮೌಲ್ಯ 5000 ಕೋ.ರೂ.ಗೂ ಹೆಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲದಿನಗಳ ಹಿಂದೆಯಷ್ಟೇ ದಿಲ್ಲಿ ಪೊಲೀಸರು ಎರಡು ಕಾರ್ಯಾಚರಣೆಗಳಲ್ಲಿ 7000 ಕೋ.ರೂ.ಗೂ ಅಧಿಕ ಮೌಲ್ಯದ 700 ಕೆಜಿಯಷ್ಟು ಮಾದಕ ವಸ್ತು ವಶಪಡಿಸಿಕೊಂಡಿದ್ದರು. ಇದರ ಬೆನ್ನಿಗೆ ಗುಜರಾತ್‌ನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ದೇಶವ್ಯಾಪಿ ಇರುವ ಡ್ರಗ್ಸ್ ದಂಧೆಯ ಜಾಲ ಇದು ಎನ್ನಲಾಗಿದೆ. ಇದರೊಂದಿಗೆ ದಿಲ್ಲಿ ಪೊಲೀಸರು ಈ ತಿಂಗಳಲ್ಲಿ ಸುಮಾರು 13,000 ಕೋ. ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಂತಾಗಿದೆ.