ತೀವ್ರ ಮುಜುಗರದ ಸ್ಥಿತಿಯಲ್ಲಿ ಜೈಲು ಅಧಿಕಾರಿಗಳು
ಹೊಸದಿಲ್ಲಿ: ಸೀತಾಮಾತೆಯನ್ನು ಹುಡುಕಲು ಹೋದ ʼವಾನರʼರಿಬ್ಬರು ಇನ್ನೂ ಹಿಂದಿರುಗದಿರುವುದು ಜೈಲು ಅಧಿಕಾರಿಗಳಿಗೆ ಚಿಂತೆಯನ್ನುಂಟು ಮಾಡಿದೆ. ಇದು ಶುಕ್ರವಾರ ರಾತ್ರಿ ನಡೆದ ಘಟನೆ. ಉತ್ತರಾಖಂಡದ ಹರಿದ್ವಾರ ಜಿಲ್ಲಾ ಕಾರಾಗೃಹದಲ್ಲಿ ದಸರಾ ಅಂಗವಾಗಿ ಜೈಲಿನಲ್ಲಿ ರಾಮಲೀಲಾ ನಾಟಕ ಆಡಿಸಲಾಗಿತ್ತು. ಕೈದಿಗಳು ವಿವಿಧ ಪಾತ್ರಧಾರಿಗಳಾಗಿ ಅಭಿನಯಿಸುತ್ತಿದ್ದರು. ವಾನರ ವೇಷ ಧರಿಸಿದ್ದ ಇಬ್ಬರು ಕೈದಿಗಳು ಮಾತ್ರ ಸೀತಾಮಾತೆಯನ್ನು ಹುಡುಕಲೇಂದು ಹೋದವರು ಪರಾರಿಯಾಗಿದ್ದು, ಮಂಕುಬೂದಿ ಎರಚಿಸಿಕೊಂಡ ಜೈಲು ಅಧಿಕಾರಿಗಳನ್ನು ನೋಡಿ ಜನರು ಮುಸಿಮುಸಿ ನಗುತ್ತಿದ್ದಾರೆ. ಪೊಲೀಸರು ಮತ್ತು ಜೈಲಿನ ಸಿಬ್ಬಂದಿ ಈ ಇಬ್ಬರು ಚಾಲಾಕಿ ಕೈದಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವಿಜಯದಶಮಿ ಅಂಗವಾಗಿ ಜೈಲಿನಲ್ಲಿ ರಾಮಲೀಲಾ ನಾಟಕ ಆಡಿಸಲಾಗಿತ್ತು. ನಾಟಕ ನಡೆಯುವಾಗಲೇ ವಾನರ ವೇಷ ತೊಟ್ಟಿದ್ದ ಇಬ್ಬರು ಕೈದಿಗಳು ಏಣಿಯ ಸಹಾಯದಿಂದ ಜೈಲಿನಿಂದ ಪರಾರಿಯಾಗಿದ್ದಾರೆ. ರಾಜ್ ಕುಮಾರ್ ಮತ್ತು ಪಂಕಜ್ ಪರಾರಿಯಾದ ಕೈದಿಗಳು. ರಾಮಲೀಲಾ ನಾಟಕದಲ್ಲಿ ಈ ಇಬ್ಬರು ವಾನರ ವೇಷ ತೊಟ್ಟಿದ್ದರು. ಸೀತಾಮಾತೆಯನ್ನು ಹುಡುಕಾಟ ನಡೆಸುವ ಸನ್ನಿವೇಶ ನಡೆಯುವಾಗ ಏಣಿಯ ಸಹಾಯದಿಂದ ಜೈಲಿನ ಗೋಡೆಯನ್ನು ಏರಿ ತಪ್ಪಿಸಿಕೊಂಡಿದ್ದಾರೆ.
ಜೈಲಿನಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ಏಣಿಯನ್ನು ತಂದು ಅಲ್ಲೇ ಗೋಡೆಯ ಪಕ್ಕದಲ್ಲಿ ಒರಗಿಸಿಟ್ಟಿದ್ದರು. ಇದನ್ನು ಗಮನಿಸಿದ್ದ ಕೈದಿಗಳು ಸೀತಾಮಾತೆಯನ್ನು ಹುಡುಕುವ ಸನ್ನಿವೇಶ ಬಂದಾಗ ಸದ್ದಿಲ್ಲದೆ ಜಾರಿ ಏಣಿ ಏರಿ ಪರಾರಿಯಾಗಿದ್ದಾರೆ.
ತಪ್ಪಿಸಿಕೊಂಡ ಕೈದಿಗಳ ಪೈಕಿ ಪಂಕಜ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ರಾಜ್ ಕುಮಾರ್ ಅಪಹರಣ ಪ್ರಕರಣದಲ್ಲಿ ಬಂಧಿತಾಗಿದ್ದು, ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ್ದ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಕರ್ಮೇಂದ್ರ ಸಿಂಗ್ ಸಹ ನಾಟಕ ನೋಡಲು ಜೈಲಿಗೆ ಆಗಮಿಸಿದ್ದರು. ಕೈದಿಗಳು ಪರಾರಿಯಾದ ಮಾಹಿತಿ ತಿಳಿದ ಅವರು ಜೈಲಿನ ಸಿಬ್ಬಂದಿ ಕರ್ತವ್ಯ ಲೋಪದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೂ ನಾಟಕ ಆಯೋಜನೆ ಮಾಡಲಾಗಿತ್ತು, ಕೈದಿಗಳಿಗೆ ಸಿಗುವಂತೆ ಏಣಿಯನ್ನು ಇಟ್ಟು, ಜೈಲಿನ ಸಿಬ್ಬಂದಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.