ಪುತ್ತೂರು: ಈ ಬಾರಿಯ ವಿಧಾನ ಪರಿಷತ್ ಉಪಚುನಾವಣೆ ಕರ್ನಾಟಕಕ್ಕೆ ದಿಕ್ಸೂಚಿ ಕೊಡುವಂತಹ ಚುನಾವಣೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಅವರು ಭಾನುವಾರ ನಗರದ ಜೈನಭವನದಲ್ಲಿ ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಕಾರ್ಯಕರ್ತರಿಗಾಗಿ, ಕಾರ್ಯಕರ್ತರಿಂದ ಕಾರ್ಯಕರ್ತರನ್ನು ಆರಿಸುವ ಚುನಾವಣೆ ಇದಾಗಿದ್ದು, ಈ ಸ್ಥಾನಕ್ಕೆ ನ್ಯಾಯ ನೀಡಿರುವ ಕೋಟಾ ಶ್ರೀನಿವಾಸ ಪೂಜಾರಿ ಸ್ಥಾನಕ್ಕೆ, ಸ್ಥಳೀಯ ಜನಪ್ರತಿನಿಧಿಗಳ ಸಮಸ್ಯೆಗಳಿಗೆ ಧ್ವನಿವಾಗಲು ಕಿಶೋರ್ ಬೊಟ್ಯಾಡಿಯಂತಹ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಬಿಜೆಪಿ ಚುನಾವಣಾ ಕಣಕ್ಕಿಳಿಸಿದೆ. ಈ ನಿಟ್ಟಿನಲ್ಲಿ ರಾಷ್ಟ್ರದ ಕುರಿತು ಅಭಿಮಾನ ಇರುವ ಎಲ್ಲರನ್ನು ಮತ ನೀಡುವಂತೆ ಪ್ರೇರೇಪಿಸುವ ಮೂಲಕ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಕೊಡಬೇಕೆಂದು ವಿನಂತಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಈ ಚುನಾವಣೆಯ ಗೆಲುವು ಮುಂದಿನ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗೆ ಅಡಿಪಾಯವಾಗಿದ್ದು, ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಮತಗಳನ್ನು ಗಟ್ಟಿ ಮಾಡುವ ಜತೆ ಜಾಸ್ತಿ ಮಾಡಬೇಕಾದ ಅಗತ್ಯವಿದೆ ಎಂದ ಅವರು, ಹರಿಯಾಣದ ಚುನಾವಣೆಯನ್ನು ಸಂಭ್ರಮಿಸಿರುವ ನಾವು ಕರ್ನಾಟಕದ ಚುನಾವಣೆಯನ್ನು ಹರಿಯಾಣದವರು ಸಂಭ್ರಮಿಸಲು ಅವಕಾಸ ಮಾಡಿಕೊಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆಗೆ ಸಮರ್ಥ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ. ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ವಿಧಾನಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಮಾತನಾಡಿ, ತ್ಯಾಗ, ಬಲಿದಾನಕ್ಕೆ ಹೆಸರುವಾಸಿಯಾದ ಪಕ್ಷ ಬಿಜೆಪಿ..ವಿಧಾನಪರಿಷತ್ ಗೆ ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಬಿಜೆಪಿ ಆಯ್ಕೆ ಮಾಡಿದೆ. ಕೇವಲ ಹುದ್ದೆಗೋಸ್ಕರ ಬಿಜೆಪಿಯಲ್ಲಿ ಯಾರೂ ಕೆಲಸ ಮಾಡುತ್ತಿಲ್ಲ. ಹಿಂದುತ್ವದ ಆಧಾರದಲ್ಲಿ ನಿಷ್ಟಾವಂತ ಕಾರ್ಯಕರ್ತರ, ಸ್ಥಳೀಯ ಜನಪ್ರತಿನಿಧಿಗಳ ಧ್ವನಿಯಾಗಿ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದರು.
ದ.ಕ.ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮತದಾನ ಮಾಡುವ ಕುರಿತ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವೇದಿಕೆಯಲ್ಲಿ ಜಿಲ್ಲಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಮಾಜಿ ಶಾಸಕ ಸಂಜೀವ ಮಠಂದೂರು, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ಆರ್.ಸಿ.ನಾರಾಯಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಮಾರ್ತ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಗೌರಿ, ನಗರಸಭೆ ಅಧ್ಯಕ್ಷೆ ಲೀಲಾವತಿ, ನಗರ ಮಂಡಲ ಅಧ್ಯಕ್ಷ ಪಿ.ಬಿ.ಶಿವಕುಮಾರ್ ಕಲ್ಲಿಮಾರು, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು, ಗ್ರಾಮಾಂತರ ಮಂಡಲದ ಉಮೇಶ್ ಕೋಡಿಬೈಲು, ನಗರ ಮಂಡಲದ ನಾಗೇಶ್ ಪ್ರಭು, ಅನಿಲ್ ತೆಂಕಿಲ, ಚುನಾವಣಾ ನಿರ್ವಹಣಾ ಸಮಿತಿ ಸಹಸಂಚಾಲಕ ಸಂತೋಷ್ ಕೈಕಾರ ಉಪಸ್ಥಿತರಿದ್ದರು.
ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ನಿತೀಶ್ ಕುಮಾರ್ ಶಾಂತಿವನ ಸ್ವಾಗತಿಸಿದರು. ಸುನಿಲ್ ದಡ್ಡು ಕಾರ್ಯಕ್ರಮ ನಿರೂಪಿಸಿದರು.