ಶೋಕವು ಶ್ಲೋಕವಾದ ಕತೆ ರಾಮಾಯಣ

ಆದಿ ಕವಿ ವಾಲ್ಮೀಕಿ, ಆದಿ ಕಾವ್ಯ ರಾಮಾಯಣ

ಕೂಜನ್ತಂ ರಾಮ ರಾಮೇತಿ
ಮಧುರ ಮಧುರಾಕ್ಷರಮ್|
ಆರುಹ್ಯ ಕವಿತಾ ಶಾಖಾಂ
ವಂದೇ ವಾಲ್ಮೀಕಿ ಕೋಕಿಲಂ||

ಈ ಒಂದು ಶ್ಲೋಕ ಸಾಕು ಆದಿಕವಿ ವಾಲ್ಮೀಕಿಯ ಮಹತ್ವವನ್ನು ಅಳೆಯಲು. ರಾಮ,ರಾಮ ಎಂಬ ಸುಮಧುರ ಅಕ್ಷರವನ್ನು ಕೂಗುತ್ತ ಕವಿತೆಯೆಂಬ ರೆಂಬೆಯನ್ನು ಆರೋಹಣ ಮಾಡಿರುವ ವಾಲ್ಮೀಕಿ ಎಂಬ ಕವಿ ಕೋಗಿಲೆಗೆ ನನ್ನ ನಮಸ್ಕಾರಗಳು ಎಂಬುದು ಆ ಶ್ಲೋಕದ ಅರ್ಥ.































 
 

ಜಗತ್ತಿನ ಮೊದಲ ಕವಿ ವಾಲ್ಮೀಕಿ ಮತ್ತು ಮೊದಲ ಕಾವ್ಯ ರಾಮಾಯಣ. ಕ್ರಿಸ್ತಪೂರ್ವ ಐದನೇ ಶತಮಾನದಲ್ಲಿ ನಡೆದ ಐತಿಹಾಸಿಕ ಘಟನೆಯೇ ರಾಮಾಯಣ. ಅದು ಐತಿಹಾಸಿಕ ಎಂಬುದಕ್ಕೆ ನೂರಾರು ಪುರಾವೆಗಳು ನಮಗೆ ಭಾರತದಲ್ಲಿ ದೊರೆಯುತ್ತವೆ.

ಅಯೋಧ್ಯೆ, ಮಿಥಿಲಾ, ಚಿತ್ರಕೂಟ, ಗೋಮತಿ, ತಮಸಾ ನದಿ, ಸರಯೂ ನದಿ, ಋಷ್ಯಮೂಕ ಪರ್ವತ, ಕಿಷ್ಕಿಂದೆ ಎಲ್ಲವೂ ಇಂದಿಗೂ ಭಾರತದಲ್ಲಿ ಇವೆ. ಅಂತಹ ಐತಿಹಾಸಿಕ ಘಟನೆಗಳನ್ನು ಅತಿ ಸುಂದರ ಪೌರಾಣಿಕ ಕಾವ್ಯವಾಗಿ ಹೆಣೆದವರು ವಾಲ್ಮೀಕಿ. ಆದ್ದರಿಂದ ಆತನು ಕಾವ್ಯದೃಷ್ಟಾರ.

ಶೋಕ ಶ್ಲೋಕವಾದ ಘಟನೆ

ವಾಲ್ಮೀಕಿ ಮಹರ್ಷಿ ತನ್ನ ಶಿಷ್ಯ ಭಾರದ್ವಾಜರ ಜೊತೆಗೆ ತಮಸಾ ನದಿಯ ತೀರದಲ್ಲಿ ಒಂದು ಮರದ ಕೆಳಗೆ ಗಾಢ ತಪಸ್ಸನ್ನು ಆಚರಿಸುತ್ತಿದ್ದ ಸಂದರ್ಭ. ಅದೇ ಮರದ ಮೇಲೆ ಎರಡು ಕ್ರೌಂಚ ಪಕ್ಷಿಗಳು ತಮ್ಮ ಪ್ರಣಯ ವಿಹಾರದಲ್ಲಿ ಮುಳುಗಿದ್ದವು. ಒಂದು ಗಂಡು, ಒಂದು ಹೆಣ್ಣು ಕ್ರೌಂಚ ಪಕ್ಷಿಗಳ ಪ್ರೀತಿಯ ಕಲರವ ವಾಲ್ಮೀಕಿ ಋಷಿಯ ತಪಸ್ಸನ್ನು ಸ್ವಲ್ಪ ವಿಚಲಿತ ಮಾಡಿದ್ದು ಸುಳ್ಳಲ್ಲ.

ಅದೇ ಹೊತ್ತಿಗೆ ಒಬ್ಬ ಬೇಡನು ದೂರದಿಂದ ಬಾಣ ಬಿಟ್ಟು ಗಂಡು ಕ್ರೌಂಚ ಪಕ್ಷಿಯನ್ನು ಸಾಯಿಸುತ್ತಾನೆ. ಆಗ ಹೆಣ್ಣು ಪಕ್ಷಿ ಆಕ್ರಂದನ ಮಾಡುತ್ತ ಆ ಗಂಡು ಪಕ್ಷಿಯ ಸುತ್ತ ನೆಲದಲ್ಲಿ ಹೊರಳಾಡುವ ದೃಶ್ಯ ಮುನಿಯ ಸಿಟ್ಟಿಗೆ ಕಾರಣ ಆಯಿತು. ಆ ಬೇಡನ ಮೇಲೆ ವಾಲ್ಮೀಕಿಯ ಕ್ರೋಧವು ಒಂದು ಶ್ಲೋಕ ರೂಪದ ಶಾಪವಾಗಿ ಹೊರಹೊಮ್ಮಿತು.

ಮಾ ನಿಷಾಧ ತ್ವಮಗಮಹ
ಶಾಶ್ವತೀ ಸಮಾಹ|
ಯತ್ ಕ್ರೌಂಚ ಮಿಥುನಾದೇಕಮವಧೀ
ಕಾಮ ಮೊಹಿತಮ್||

ಪಕ್ಷಿಯ ಶೋಕವು ಶ್ಲೋಕವಾಗಿ ಹೊರಹೊಮ್ಮಿದ ಜಗತ್ತಿನ ಮೊದಲ ಘಟನೆಯದು. ಆದರೆ ಆ ಶ್ಲೋಕವು ಅದ್ಭುತವಾದ ಛಂದಸ್ಸು ಮತ್ತು ಅಲಂಕಾರದಲ್ಲಿ ವಾಲ್ಮೀಕಿಯ ಬಾಯಿಂದ ಹೊಮ್ಮಿತ್ತು. ಅದು ಹೇಗೆ? ಯಾಕೆ? ಒಂದೂ ಅರ್ಥವಾಗದೆ ವಾಲ್ಮೀಕಿಯು ಗೊಂದಲದಲ್ಲಿ ಕೂತು ಬಿಟ್ಟನು.

ಆಗ ಬ್ರಹ್ಮದೇವನು ಪ್ರತ್ಯಕ್ಷನಾಗಿ ಅದೇ ಶ್ಲೋಕವನ್ನು ಆರಂಭದ ಶ್ಲೋಕವಾಗಿ ಇಟ್ಟುಕೊಂಡು ರಾಮಾಯಣದ ಮಹಾಕಾವ್ಯವನ್ನು ಬರೆಯಲು ಆದೇಶವನ್ನು ಕೊಡುತ್ತಾನೆ. ಹಾಗೆ ಹುಟ್ಟಿದ್ದೇ ರಾಮಾಯಣ. ಅದು ಶ್ರೀ ರಾಮಚಂದ್ರ ದೇವರ ಕತೆ. ಜಗತ್ತಿನ ಎಲ್ಲ ಆದರ್ಶಗಳ ಮೂಟೆಯೇ ರಾಮಾಯಣ.

ಆಶ್ಚರ್ಯ ಎಂದರೆ ಅದೇ ವಾಲ್ಮೀಕಿ ಋಷಿಯು ಹಿಂದೆ ಒಬ್ಬ ಕಠೋರ ಮನಸ್ಸಿನ ದರೋಡೆಕೋರ ಆಗಿದ್ದು, ನೂರಾರು ಜನರ ಪ್ರಾಣವನ್ನು ತೆಗೆದಿದ್ದನು. ಆಗ ಮೂಡದೇ ಇದ್ದ ಕರುಣೆ, ಶೋಕ ಈ ಕ್ರೌಂಚ ಪಕ್ಷಿಯ ಸಾವಿನ ಕಾರಣಕ್ಕೆ ಹುಟ್ಟಿತ್ತು ಅಂದರೆ ಅದು ವಿಸ್ಮಯ. ಅದು ವಾಲ್ಮೀಕಿ ಋಷಿಯಲ್ಲಿ ತಪಸ್ಸಿನ ಕಾರಣಕ್ಕೆ ಆಗಿದ್ದ ಪರಿವರ್ತನೆ ಮತ್ತು ವಿಕಾಸದ ಸಂಕೇತ.

ರಾಮಾಯಣ ಒಂದು ಅದ್ಭುತ ಮಹಾಕಾವ್ಯ

ವಾಲ್ಮೀಕಿ ಮಹರ್ಷಿ ಬರೆದ ರಾಮಾಯಣ ಜಗತ್ತಿನ ಆದಿ ಕಾವ್ಯ ಮಾತ್ರವಲ್ಲ ಅದು ಅತ್ಯಂತ ಶ್ರೇಷ್ಠ ಮಹಾಕಾವ್ಯ. ಅದರಲ್ಲಿಯೂ ಶ್ರೀರಾಮನ ಪಾತ್ರ ಅದ್ಭುತವೇ ಆಗಿದೆ. ಅಷ್ಟು ತೂಕ ಮತ್ತು ಮೌಲ್ಯದ ಪಾತ್ರ ಜಗತ್ತಿನ ಬೇರೆ ಯಾವ ಕಾವ್ಯದಲ್ಲಿ ಬಂದಿಲ್ಲ ಎನ್ನುವುದನ್ನು ಜಗತ್ತಿನ ವಿದ್ವಾಂಸರೇ ಒಪ್ಪಿಕೊಂಡಿದ್ದಾರೆ. ವಾಲ್ಮೀಕಿ ಸೃಜಿಸಿದ ರಾಮರಾಜ್ಯದ ಕಲ್ಪನೆ ಇನ್ನೂ ಅದ್ಭುತ. ಭಾರತದಲ್ಲಿ ಈಗ ಜೀವಂತ ಆಗಿರುವ ಪ್ರಜಾಪ್ರಭುತ್ವ ಸಿದ್ಧಾಂತದ ಪಂಚಾಂಗವೆ ರಾಮರಾಜ್ಯದ ಕಲ್ಪನೆ.

ರಾಮಾಯಣದಲ್ಲಿ ಇರುವುದೆಲ್ಲವೂ ಅನುಕರಣೀಯ ಆದರ್ಶ

ಒಬ್ಬ ಒಳ್ಳೆಯ ಅರಸ ಹೇಗಿರಬೇಕು? ಒಳ್ಳೆಯ ಮಗ ಹೇಗಿರಬೇಕು? ಒಳ್ಳೆಯ ಅಪ್ಪ ಹೇಗಿರಬೇಕು? ಒಳ್ಳೆಯ ಸಹೋದರ ಹೇಗಿರಬೇಕು? ಒಳ್ಳೆಯ ಅಮ್ಮ ಹೇಗಿರಬೇಕು? ಒಳ್ಳೆಯ ಅತ್ತಿಗೆ ಹೇಗಿರಬೇಕು? ಒಳ್ಳೆಯ ಅಣ್ಣ ಹೇಗಿರಬೇಕು?… ಹೀಗೆ ಎಲ್ಲ ಆದರ್ಶಗಳು ಒಂದೇ ಕಡೆ ಪಲ್ಲವಿಸಿದ ಒಂದೇ ಮಹಾಕಾವ್ಯ ನಮಗೆ ಬೇಕು ಅಂತಾದರೆ ನಾವು ರಾಮಾಯಣ ಓದಬೇಕು.

ರಾಮಾಯಣದಲ್ಲಿ ಎಲ್ಲವೂ ಅನುಕರಣೀಯ ಆದರ್ಶಗಳೇ ಇವೆ. ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸಿ’ ಎಂದು ಶ್ರೀ ರಾಮನ ಮೂಲಕ ಹೇಳಿಸಿದ ವಾಲ್ಮೀಕಿ ದೇಶಪ್ರೇಮದ ಒಂದು ಶಿಖರವನ್ನು ತಲುಪುತ್ತಾನೆ.

ವಾಲ್ಮೀಕಿ ತಾನೇ ಬರೆದ ಮಹಾಕಾವ್ಯದಲ್ಲಿ ಪಾತ್ರವಾಗಿ

ವಾಲ್ಮೀಕಿ ಋಷಿ ತಾನೇ ಬರೆದ ರಾಮಾಯಣದ ಉತ್ತರ ಕಾಂಡದಲ್ಲಿ ಒಂದು ಪ್ರಮುಖವಾದ ಪಾತ್ರವಾಗಿ ಬರುತ್ತಾನೆ. ರಾಮನು ಕಾಡಿನಲ್ಲಿ ಬಿಟ್ಟಿದ್ದ ಗರ್ಭಿಣಿಯಾಗಿದ್ದ ಸೀತೆಯ ಹೆರಿಗೆಯನ್ನು ತನ್ನ ಆಶ್ರಮದಲ್ಲಿ ಮಾಡಿಸುತ್ತಾನೆ. ನಂತರ ಅವಳಿ ಮಕ್ಕಳಾದ ಲವ ಮತ್ತು ಕುಶರ ಗುರುವಾಗಿ ಅವರಿಗೆ ರಾಮಾಯಣವನ್ನು ರಾಗಬದ್ಧವಾಗಿ ಹಾಡಲು ಕಲಿಸುತ್ತಾನೆ. ಕೊನೆಯಲ್ಲಿ ಲವ, ಕುಶ ಮತ್ತು ಸೀತೆಯನ್ನು ಅಯೋಧ್ಯೆಗೆ ಕರೆದುಕೊಂಡು ಬಂದು ರಾಮನ ಜೊತೆಗೆ ಸೇರಿಸುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತಾನೆ.

ಹೀಗೆ ಮಾನವೀಯತೆಯ ಸಂಕೇತವಾಗಿ, ಯುಗಾವತಾರಿ ಆಗಿ, ಜಗತ್ತಿನ ಮೊದಲ ಕವಿಯಾಗಿ, ಶ್ರೀ ರಾಮನಂತಹ ದೇವರನ್ನೇ ಜಗತ್ತಿಗೆ ಕಾಣಿಕೆಯಾಗಿ ನೀಡಿದ ದಾರ್ಶನಿಕನಾಗಿ ನಮಗೆ ವಾಲ್ಮೀಕಿ ಗೋಚರಿಸುತ್ತಾನೆ.

ಮಹರ್ಷಿ ವಾಲ್ಮೀಕಿ ಅವರ ಅನುಗ್ರಹವು ನಮಗೆಲ್ಲ ಸಿಗಲಿ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top