ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಬಿಷ್ಣೋಯ್‌ ಗ್ಯಾಂಗ್‌ ಕೃತ್ಯ?

ಎನ್‌ಸಿಪಿ ನಾಯಕನ ಹತ್ಯೆಯಿಂದ ನಟ ಸಲ್ಮಾನ್‌ ಖಾನ್‌ಗೆ ನಡುಕ

ಮುಂಬಯಿ: ಮಹಾರಾಷ್ಟ್ರದ ಮಾಜಿ ಸಚಿವ, ಪ್ರಭಾವಿ ಮುಸ್ಲಿಂ ನಾಯಕ ಬಾಬಾ ಸಿದ್ದಿಕಿ ಅವರನ್ನು ದಸರಾ ದಿನವೇ ಹತ್ಯೆ ಮಾಡಿರುವುದು ಆಘಾತದ ಅಲೆ ಎಬ್ಬಿಸಿದೆ. ಇದು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಕೃತ್ಯವೇ ಎಂಬ ಅನುಮಾನ ಮೂಡಿದೆ. ಹತ್ಯೆ ಕೃತ್ಕಕ್ಕೆ ಸಂಬಂಧಿಸಿ ಸೆರೆಯಾಗಿರುವ ಇಬ್ಬರು ಶಂಕಿತರು ತಮ್ಮನ್ನು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಸದಸ್ಯರು ಎಂದು ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಬಾಲಿವುಡ್‌ನಲ್ಲೂ ಬಾಬಾ ಸಿದ್ದಿಕಿಯ ಹತ್ಯೆ ತಲ್ಲಣ ಮೂಡಿಸಿದೆ. ನಿರ್ದಿಷ್ಟವಾಗಿ ನಟ ಸಲ್ಮಾನ್‌ ಖಾನ್‌ಗೆ ನಡುಕವುಂಟಾಗಿದೆ.

ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ನಟ ಸಲ್ಮಾನ್‌ ಖಾನ್‌ ಪ್ರಾಣಕ್ಕಾಗಿ ಕಳೆದ ಸುಮಾರ 25 ವರ್ಷಗಳಿಂದ ಕಾಯುತ್ತಿದೆ. ಹಲವು ಸಲ ಸಲ್ಮಾನ್‌ ಹತ್ಯೆಗೆ ಯತ್ನವನ್ನೂ ಮಾಡಿದೆ. ಬಿಷ್ಣೋಯ್‌ ಜನಾಂಗಕ್ಕೆ ಪವಿತ್ರವಾಗಿರುವ ಕೃಷ್ಣಮೃಗವನ್ನು ಬೇಟೆಯಾಡಿದ ಸಲ್ಮಾನ್‌ ಖಾನ್‌ ಮೇಲೆ ಬಿಷ್ಣೋಯ್‌ ಗ್ಯಾಂಗ್‌ ಸೇಡು ಇಟ್ಟುಕೊಂಡಿದೆ ಎನ್ನಲಾಗುತ್ತಿದೆ.































 
 

ಮಾಜಿ ಸಚಿವ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಣಕ್ಕೆ ಸೇರಿರುವ ಬಾಬಾ ಸಿದ್ದಿಕಿ, ನಟರಾದ ಸಲ್ಮಾನ್‌ ಖಾನ್‌ ಮತ್ತು ಶಾರೂಕ್‌ ಖಾನ್‌ಗೆ ಬಹಳ ಆತ್ಮೀಯರು. ಸಲ್ಮಾನ್‌ ಖಾನ್‌ ಕೃಷ್ಣಮೃಗ ಬೇಟೆಯ ಕೇಸಿನಲ್ಲಿ ಸಿಕ್ಕಿಬಿದ್ದಿದ್ದಾಗ ಅವರಿಗೆ ಬಹಳ ಸಹಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸಾಯಿಸಿರಬಹುದು ಎಂಬ ಅನುಮಾನ ಮೂಡಿದೆ.

ಹೇಗೆ ನಡೆಯಿತು ಹತ್ಯೆ?

ಮುಂಬಯಿಯ ಉಪನಗರ ಬಾಂದ್ರಾದಲ್ಲಿ ನಿನ್ನೆ ಬಾಬಾ ಸಿದ್ದಿಕಿ ತನ್ನ ಮಗ ಶಾಸಕ ಜೀಶನ್‌ ಸಿದ್ದಿಕಿಯ ಕಚೇರಿ ಎದುರು ದಸರಾ ಹಬ್ಬದಂಗವಾಗಿ ಪಟಾಕಿ ಸಿಡಿಸುತ್ತಿದ್ದಾಗ ಬೈಕಿನಲ್ಲಿ ಬಂದ ಮೂವರು ನೇರವಾಗಿ ಅವರ ಎದೆಗೆ ಗುಂಡು ಹಾರಿಸಿದ್ದಾರೆ. ಎದೆ, ಹೊಟ್ಟೆಗೆ ಗುಂಡುಗಳು ಹೊಕ್ಕಿದ್ದು, ಗಂಭೀರ ಗಾಯಗೊಂಡಿದ್ದ ಸಿದ್ದಿಕಿ ಅವರನ್ನು ಕೂಡಲೇ ಬಾಂದ್ರದ ಲೀಲಾವತಿ ಆಸ್ಪತ್ರೆಗೆ ಒಯ್ದರೂ ಪ್ರಯೋಜನವಾಗಿರಲಿಲ್ಲ.

ರಾತ್ರಿ 9.30ರ ಸುಮಾರಿಗೆ ಬಾಂದ್ರದ ನಿರ್ಮಲ್ ನಗರ ಏರಿಯಾದಲ್ಲಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾರೆ. ಸಮೀಪದಲ್ಲಿಯೇ ರಾಮಮಂದಿರವೂ ಇದೆ. ಬಾಬಾ ಸಿದ್ದಿಕಿ ಮೇಲೆ ಎರಡು ಮೂರು ಸುತ್ತು ಗುಂಡು ಹಾರಿಸಲಾಗಿದೆ. ಅದರಲ್ಲಿ ಒಂದು ಗುಂಡು ಅವರ ಎದೆಗೆ ತಗುಲಿತು. ಬಾಬಾ ಸಿದ್ದಿಕಿ ಜೊತೆಗಿದ್ದ ಸಹೋದ್ಯೋಗಿ ಕಾಲಿಗೆ ಕೂಡ ಗುಂಡು ತಗುಲಿದೆ. 15 ದಿನಗಳ ಹಿಂದೆ ಬಾಬಾ ಸಿದ್ದಿಕಿ ಅವರಿಗೆ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.

ಸೆರೆಯಾಗಿರುವ ಶಂಕಿತರನ್ನು ಕರ್ನೈಲ್‌ ಸಿಂಗ್‌ ಮತ್ತು ಧರ್ಮರಾಜ್‌ ಕಶ್ಯಪ್‌ ಎಂದು ಗುರುತಿಸಲಾಗಿದೆ. ತಾವು ಸುಮಾರು ಒಂದು ತಿಂಗಳಿಂದ ಬಾಬಾ ಸಿದ್ದಿಕಿಯ ಚಲನವಲನದ ಮೇಲೆ ನಿಗಾ ಇಟ್ಟಿದ್ದೆವು ಎಂದು ಅವರು ಒಪ್ಪಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.

ಬಾಬಾ ಸಿದ್ದಿಕಿ ಯಾರು?

ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಬಾಬಾ ಸಿದ್ದಿಕಿ ರಾಜಕಾರಣಿ ಮತ್ತು ಉದ್ಯಮಿ. ಬಾಲಿವುಡ್‌ ಜೊತೆಗೆ ಅವರಿಗೆ ನಿಕಟ ಸಂಪರ್ಕ ಇದೆ. ಕೆಲವು ಸಿನಿಮಾಗಳಿಗೂ ಅವರು ಫೈನಾನ್ಸ್‌ ಮಾಡಿದ್ದಾರೆ. ಪ್ರತಿವರ್ಷ ಅವರು ಏರ್ಪಡಿಸುವ ಇಫ್ತಾರ್‌ ಕೂಟಗಳಲ್ಲಿ ಶಾರೂಕ್‌ ಖಾನ್‌, ಸಲ್ಮಾನ್‌ ಖಾನ್‌ ಕಾಯಂ ಆಗಿ ಭಾಗವಹಿಸುತ್ತಾರೆ. ಅಂತೆಯೇ ಹಲವಾರು ಬಾಲಿವುಡ್‌, ಕಿರುತೆರೆ ನಟ-ನಟಿಯರು, ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದರು. ಸಲ್ಮಾನ್ ಖಾನ್, ಬಾಬಾ ಸಿದ್ದಿಕಿ ಜೊತೆ ನಿಕಟ ಸಂಬಂಧ ಹೊಂದಿದ್ದರು. ಈ ಸಂಬಂಧವೆ ಅವರ ಪ್ರಾಣಕ್ಕೆ ಎರವಾಯಿತೇ ಎಂಬ ಅನುಮಾನ ಮೂಡಿದೆ.
ಮಹಾರಾಷ್ಟ್ರದಲ್ಲಿ ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಹಿರಿಯ ರಾಜಕಾರಣಿಯ ಹತ್ಯೆ ಈ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top