ಅಂತಿಮ ದರ್ಶನಕ್ಕೆ ಧಾವಿಸಿದ ತಾರೆಯರು; ಬಿಕ್ಕಿ ಬಿಕ್ಕಿ ಅತ್ತ ಶಿಲ್ಪಾ ಶೆಟ್ಟಿ
ಮುಂಬಯಿ: ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದಿಕಿ (66) ಹತ್ಯೆ ಬಾಲಿವುಡ್‌ನಲ್ಲಿ ಆಘಾತದ ಅಲೆಯೆಬ್ಬಿಸಿದೆ. ಸಲ್ಮಾನ್ ಖಾನ್, ಶಾರೂಕ್ ಖಾನ್, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ತಾರೆಯರು ಸಾವಿನ ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಧಾವಿಸಿದ್ದಾರೆ. ಶಿಲ್ಪಾ ಶೆಟ್ಟಿ ಆಸ್ಪತ್ರೆಗೆ ಬರುವಾಗ ಬಿಕ್ಕಿ ಬಿಕ್ಕಿ ಅಳುತಿದ್ದರು. ಕಾರಿನಲ್ಲಿ ಕುಳಿತು ಕೂಡ ಅವರು ಅಳುತ್ತಿರುವುದು ಕಾಣಿಸಿತು.
ನಿನ್ನೆ ರಾತ್ರಿ ಉಪನಗರ ಬಾಂದ್ರದಲ್ಲಿ ಶಾಸಕರಾಗಿರುವ ಮಗನ ಕಚೇರಿ ಎದುರೇ ಬಾಬಾ ಸಿದ್ದಿಕಿಯವರನ್ನು ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಸಾಯಿಸಿದ್ದಾರೆ. ಈ ಸಂದರ್ಭದಲ್ಲಿ ಬಾಬಾ ಸಿದ್ದಿಕಿ ದಸರಾ ಸಂಭ್ರಮ ಆಚರಿಸುತ್ತಾ ಪಟಾಕಿ ಸಿಡಿಸುತ್ತಿದ್ದರು. ಪಟಾಕಿ ಸದ್ದಿನ ನಡುವೆ ಗುಂಡು ಹಾರಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಇದು ಕುಖ್ಯಾತ ಬಿಷ್ಣೋಯ್ ಗ್ಯಾಂಗಿನ ಕೃತ್ಯ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬಾಲಿವುಡ್‌ನ ಅನೇಕ ತಾರೆಯರ ಜೊತೆಗೆ ಬಾಬಾ ಸಿದ್ದಿಕಿ ನಿಕಟ ಒಡನಾಟ ಹೊಂದಿದ್ದರು. ಅದರಲ್ಲೂ ಸಲ್ಮಾನ್ ಖಾನ್ ಅವರ ಅಂತರಂಗದ ಗೆಳೆಯರಾಗಿದ್ದರು. ಬಿಷ್ಣೋಯ್ ಸಮುದಾಯದವರು ಬಹಳ ಪವಿತ್ರ ಎಂದು ಆರಾಧಿಸುವ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪ ಸಲ್ಮಾನ್ ಮೇಲಿದ್ದು, ಈ ಪ್ರಕರಣದಿಂದ ಪಾರಾಗಲು ಬಾಬಾ ಸಿದ್ದಿಕಿ ಅವರಿಗೆ ನೆರವಾಗಿದ್ದರು. ಈ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಊಹಿಸಲಾಗಿದೆ.
ಸಿದ್ದಿಕಿ ಹತ್ಯೆ ಹಿಂದೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೊಯ್ ಕೈವಾಡದ ಶಂಕೆ ವ್ಯಕ್ತವಾಗುತ್ತಿದ್ದಂತೆ ಬಾಂದ್ರದಲ್ಲೇ ಇರುವ ಸಲ್ಮಾನ್ ನಿವಾಸ ಗ್ಯಾಲಕ್ಸಿ ಅಪಾರ್ಡ್‌ಮೆಂಟ್‌ಗೆ ಬಿಗು ಬಂದೋಬಸ್ತಿನ ಏರ್ಪಾಡು ಮಾಡಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಸಲ್ಮಾನ್ ಖಾನ್‌ಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಬಂದಿತ್ತು. ಬಳಿಕ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ಇದೀಗ ಸಿದ್ದಿಕ್ಕಿ ಹತ್ಯೆ ಬೆನ್ನಲ್ಲೇ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ. ಕೆಲವು ಸಲ ಬಿಷ್ಣೋಯ್ ಗ್ಯಾಂಗಿನವರು ಸಲ್ಮಾನ್ ಹತ್ಯೆಗೆ ಯತ್ನಿಸಿ ವಿಫಲರಾಗಿದ್ದಾರೆ.
ಘಟನೆ ಬಳಿಕ ಹರ್ಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂಬ ಆರೋಪಿಗಳನ್ನು ಬಂಧಿಸಿರುವ ಮುಂಬಯಿ ಕ್ರೈಂ ಬ್ರ್ಯಾಂಚ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆಗೆ 4 ವಿಶೇಷ ತಂಡಗಳನ್ನ ರಚಿಸಿದ್ದು, 2 ಆಯಾಮಗಳಿಂದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ. ಒಂದು ಬಿಷ್ಣೋಯ್ ಗ್ಯಾಂಗ್, ಮತ್ತೊಂದು ಸ್ಲಂ ಪುನರ್ವಸತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ. ಆದರೆ ಸಿದ್ದಿಕಿ ಅವರಿಗೆ ಯಾವುದೇ ಬೆದರಿಕೆಗಳು ಬಂದಿರಲಿಲ್ಲ ಎನ್ನಲಾಗಿದೆ. ಬಿಲ್ಡರ್ ಆಗಿದ್ದ ಸಿದ್ದಿಕಿ ಮುಂಬಯಿಯಲ್ಲಿ ಅನೇಕ ಯೋಜನೆಗಳನ್ನು ನಿರ್ಮಾಣ ಮಾಡಿದ್ದರು.
ಡಜನ್‌ಗಟ್ಟಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್ ಜೈಲಿನಲ್ಲಿದ್ದಾನೆ. ಆದರೆ ಅವನ ಗ್ಯಾಂಗ್‌ನಿಂದ ಉದ್ಯಮಿಗಳು, ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಲೇ ಇವೆ. ಬಿಷ್ಣೋಯ್ ಗ್ಯಾಂಗ್‌ನಲ್ಲಿ 700ಕ್ಕೂ ಹೆಚ್ಚು ಶೂಟರ್‌ಗಳಿದ್ದಾರೆ. ದೇಶಾದ್ಯಂತ ಅನೇಕ ಕ್ರಿಮಿನಲ್‌ಗಳು ಅವನಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಂಬಯಿಯ ಬಾಂದ್ರ ಪೂರ್ವದ ಶಾಸಕರಾಗಿರುವ ಪುತ್ರ ಜೀಶಾನ್ ಅವರ ಕಚೇರಿ ಎದುರು ಶನಿವಾರ ರಾತ್ರಿ 9.30ರ ಸುಮಾರಿಗೆ ಸಿದ್ದಿಕಿ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಗುಂಡು ಎದೆಗೆ ತಗುಲಿದ್ದರಿಂದ ಅವರು ಸಾವಿಗೀಡಾಗಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕಿ 48 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದರು. ಫೆಬ್ರವರಿಯಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರಿದ್ದರು. ಪುತ್ರ ಜೀಶನ್ ಸಿದ್ದಿಕಿ ಅವರನ್ನು ಆಗಸ್ಟ್‌ನಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿತ್ತು.