ಮೈಸೂರಿನಿಂದ ಬಿಹಾರಕ್ಕೆ ತೆರಳುತ್ತಿದ್ದಾಗ ರೈಲು ಗೂಡ್ಸ್ ರೈಲಿಗೆ ಡಿಕ್ಕಿ
ಬೆಂಗಳೂರು: ಚೆನ್ನೈ ಸಮೀಪ ನಿನ್ನೆ ರಾತ್ರಿ ಸಂಭವಿಸಿದ ರೈಲು ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆ 19ಕ್ಕೇರಿದೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಿದೆ. ಮೈಸೂರಿನಿಂದ ಬಿಹಾರದ ದರ್ಬಾಂಗ್‌ಗೆ ತೆರಳುತ್ತಿದ್ದ ಬಾಗಮತಿ ಎಕ್ಸ್‌ಪ್ರೆಸ್ ರೈಲು ಚೆನ್ನೈ ಸಮೀಪ ಗೂಸ್ ರೈಲಿಗೆ ಡಿಕ್ಕಿ ಹೊಡೆದ ಅಪಘಾತ ಸಂಭವಿಸಿದೆ. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಆಯುಧ ಪೂಜೆ ದಿನವೇ ಸಂಭವಿಸಿದ ಈ ಅಪಘಾತಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಅದೃಷ್ಟವಶಾತ್ ಇಲ್ಲಿಯವರೆಗೆ ಸಾವಿನ ಬಗ್ಗೆ ವರದಿ ಬಂದಿಲ್ಲ. ಈ ಅಪಘಾತದಲ್ಲಿ ದೊಡ್ಡ ಅನಾಹುತವಾಗಿಲ್ಲ ಎಂದು. ಆದರೆ ಆಯುಧ ಪೂಜೆ ದಿನವೇ ಅಪಘಾತ ಸಂಭವಿಸಬಾರದಿತ್ತು ಎಂದು ವಿ.ಸೋಮಣ್ಣ ಹೇಳಿದ್ದಾರೆ.
ಎಲ್ಲ ಪ್ರಯಾಣಿಕರನ್ನು ಮೆಮು ರೈಲಿನ ಮೂಲಕ ಶಿಫ್ಟ್ ಮಾಡಲಾಗಿದೆ. ಶನಿವಾರ ಪ್ರಯಾಣಿಕರು ಎಲ್ಲೆಲ್ಲಿಗೆ ತಲುಪಬೇಕು ಅಲ್ಲಿಗೆ ತಲುಪಲು ವ್ಯವಸ್ಥೆ ಮಾಡಲಾಗುತ್ತದೆ. ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ. ಯಾವ ಕಾರಣಕ್ಕೆ ಅಪಘಾತವಾಯ್ತು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಮೈಸೂರಿನಿಂದ ದರ್ಭಾಂಗ್‌ಗೆ ತೆರಳುತ್ತಿದ್ದ ಬಾಗಮತಿ ಎಕ್ಸ್‌ಪ್ರೆಸ್ ರೈಲು ರಾತ್ರಿ 8:30ರ ವೇಳೆ ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಕ್ಸ್‌ಪ್ರೆಸ್ ರೈಲಿನ 12 ಬೋಗಿಗಳು ಹಳಿತಪ್ಪಿದ್ದು, 2 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕರ್ನಾಟಕದ 1 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಇದರಲ್ಲಿದ್ದರು. ರಾಜ್ಯದ ಪ್ರಯಾಣಿಕರಿದ್ದ ಬೋಗಿಗೂ ಹಾನಿಯಾಗಿದೆ. ಬಿಹಾರ ಕಡೆ ಹೊರಟಿದ್ದ ಪ್ರಯಾಣಿಕರಿಗೆ ಬದಲಿ ರೈಲಿನ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗಿದೆ.