ಪುತ್ತೂರು: ಕನ್ನಡ ಸಾಹಿತ್ಯ ಪರಂಪರೆಗೆ ಡಾ. ಶಿವರಾಮ ಕಾರಂತರ ಕೊಡುಗೆ ಅಪಾರವಾಗಿದ್ದು, ದೇಶವೇ ಗುರುತಿಸಿರುವಂತಹ ಮಹೋನ್ನತ ಸಾಧಕರಾದ ಡಾ. ಕಾರಂತರ ಮೌಲ್ಯಗಳು ಮತ್ತು ತತ್ವಗಳನ್ನು ನಮ್ಮ ಜೀವನದಲ್ಲಿ ಸದಾ ಅಳವಡಿಸಿಕೊಳ್ಳಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.
ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರು ಪರ್ಲಡ್ಕದ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಬಾಲವನ ಸಮಿತಿ ಮತ್ತು ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ವತಿಯಿಂದ ಗುರುವಾರ ಆಯೋಜಿಸಲಾದ ಡಾ. ಶಿವರಾಮ ಕಾರಂತರ 123 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಕಾರಂತರ ಪ್ರತಿಮೆಗೆ ಹಾರಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅವರು ಮಾತನಾಡಿದರು.
ಬಹುಮುಖೀ ವ್ಯಕ್ತಿತ್ವವನ್ನು ಹೊಂದಿದ್ದ ಡಾ. ಶಿವರಾಮ ಕಾರಂತರು ಓರ್ವ ಗಾಂಧೀವಾದಿಯಾಗಿದ್ದರು. ಗಾಂಧೀಜಿಯಂತೆ ಅವರು ಪ್ರಕೃತಿ, ಮಕ್ಕಳು, ಕಲೆಗೆ ಪ್ರೀತಿ ಹಾಗೂ ಪ್ರೋತ್ಸಾಹ ನೀಡಿ ಬೆಳೆಸಿದ್ದರು. ೪೦ ಕ್ಕೂ ಮಿಕ್ಕಿ ಕಾದಂಬರಿ, ೪ ನಾಟಕ, ಕಥಾ ಸಂಕಲನ ರಚನೆ ಸೇರಿದಂತೆ ಮಕ್ಕಳಿಗಾಗಿ ಹಲವಾರು ಲೇಖನಗಳನ್ನು ಬರೆದಿದ್ದರು. ಇದರೊಂದಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿ ತಮ್ಮದೇ ಆಗಿರುವ ಕೊಡುಗೆಯನ್ನು ನೀಡಿದ್ದಾರೆ. ಡಾ. ಕಾರಂತರು ಮಾಡಿದ ಸಾಧನೆಗಳು ಎಂದಿಗೂ ನೆನಪಿನಲ್ಲಿ ಉಳಿಯುವಂತದ್ದಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ವಿ.ಬಿ. ಅರ್ತಿಕಜೆ ಮಾತನಾಡಿ, ಡಾ. ಕಾರಂತರು ಸಾಹಿತ್ಯ ಕೃಷಿ ಮಾಡಿದ ಕರ್ಮಭೂಮಿ ಬಾಲವನ ನಮಗೆಲ್ಲರಿಗೂ ಪುಣ್ಯಭೂಮಿ. ನೇರ ನಡೆ-ನುಡಿಯ ಕ್ರಿಯಾಶಕ್ತಿ ಹೊಂದಿದ್ದ ಡಾ. ಶಿವರಾಮ ಕಾರಂತರು ಯಾವುದೇ ವಿಷಯದಲ್ಲಿ ‘ಆಸಕ್ತಿ’ ಮಾತ್ರ ಸಾಲದು ‘ಆ ಶಕ್ತಿ’ ಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಕಠಿಣವಾಗಿ ಮಾತನಾಡಬಲ್ಲ ಓರ್ವ ಖಾರದ ವ್ಯಕ್ತಿತ್ವ ಕಾರಂತರದ್ದು ಎಂದರು.
ತಹಶೀಲ್ದಾರ್ ಪುರಂದರ ಹೆಗ್ಡೆ, ಪೌರಾಯುಕ್ತ ಮಧು ಎಸ್. ಮನೋಹರ್, ಕ್ಷೇತ್ರ ಶೀಕ್ಷಣಾಧಿಕಾರಿ ಲೋಕೇಶ್ ಎಸ್. ಆರ್., ಲೋಕೋಪಯೋಗಿ ಇಲಾಖೆಗೆ ಕಾರ್ಯಪಾಲಕ ಎಂಜಿನಿಯರ್ ರಾಜಾರಾಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಲವನ ಕಾರ್ಯಕ್ರಮ ಸಂಯೋಜಕರಾದ ಶಿಕ್ಷಕ ಜಗನ್ನಾಥ ಅರಿಯಡ್ಕ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ಹರ್ಷಿತಾ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರ್ವಹಿಸಿದರು.
ನವಂಬರ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ:
ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆಯನ್ನು ಈ ಹಿಂದೆ ನಿಗದಿಪಡಿಸಿದಂತೆ ಇಂದು ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದಕ್ಕಾಗಿ ಈ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗಿದೆ. ನವೆಂಬರ್ ತಿಂಗಳಲ್ಲಿ ಡಾ. ಶಿವರಾಮ ಕಾರಂತರ ಹೆಸರಿನ ಪ್ರಶಸ್ತಿ ಪ್ರದಾನ ಸೇರಿದಂತೆ ಈಗಾಗಲೇ ಹಾಕಿಕೊಂಡಿರುವ ಯೋಜನೆಯಂತೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ.